ರಾಜ್ಯ

ಬಾಗಲಕೋಟೆ: ಸುಳ್ಳು 'ವೈರಸ್ ಸುದ್ದಿ' ವೈರಲ್ ಮಾಡಿದ ಭೂಪನಿಗೆ ಪೊಲೀಸ್ ಆತಿಥ್ಯ!

Srinivasamurthy VN

ಬಾಗಲಕೋಟೆ: ಕೊರೋನಾ ವೈರಸ್ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಭೂಪನನ್ನು ಪೊಲೀಸರು ವಶಕ್ಕೆ ಪಡೆದು ಆತಿಥ್ಯ ನೀಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಸೊಲ್ಲಾಪುರದಿಂದ ಬಂದ ವ್ಯಕ್ತಿಯೊಬ್ಬ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದು, ಆತನ ಮನೆಯವರಿಗೂ ಸೋಂಕು ತಗುಲಿರಬಹುದು ಎಂದು ವೈರಲ್ ಮಾಡಿದವ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸುಳ್ಳು ಸುದ್ದಿ ಹರಡಿದ್ದ ವ್ಯಕ್ತಿಯನ್ನು ತೇರದಾಳದ ಡಿ.ವಿ. ಪತ್ತಾರ ಎಂದು  ಗುರುತಿಸಲಾಗಿದೆ. 

ಪೊಲೀಸ್ ವಶದಲ್ಲಿರುವ ವ್ಯಕ್ತಿಯು ಜಮಖಂಡಿ ಶುರ‍್ಸ್ ಮತ್ತು ಅಡಿಹುಡಿ ಗ್ರಾಮದ ಮಧ್ಯದಲ್ಲಿ ಬರುವ ತೋಟದ ಮನೆಯಲ್ಲಿ ವಾಸವಿರುವ ಸೊಲ್ಲಾಪುರದಿಂದ ಮರಳಿ ಬಂದಿರುವ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿ ಮೃತಪಟ್ಟಿದ್ದು, ಆತನ ಕುಟುಂಬದವರಿಗೂ ಸೋಂಕು ತಗುಲಿರಬಹುದು.  ಈ ಬಗ್ಗೆ ಇನ್ನೂ ಚೆಕ್ ಮಾಡಿರುವುದಿಲ್ಲ ಎಂದು ಸುಳ್ಳು ಸುದ್ದಿಯನ್ನು ಆಡಿಯೋ ರೆಕಾರ್ಡಿಂಗ್ ಮಾಡಿ ಅದರ ಸಂಭಾಷಣೆಯನ್ನು ವಾಟ್ಸಪ್ ಗ್ರೂಪ್‌ಗೆ ಕಳುಹಿಸಿ, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಯನ್ನು  ವಶಕ್ಕೆ ಪಡೆದಿದ್ದಾರೆ. ಸುಳ್ಳು ಸುದ್ದಿ ಹರಡಿಸಿದ್ದ ಪತ್ತಾರ ಎಂಬುವರು ಪೊಲೀಸ್ ವಶದಲ್ಲಿದ್ದು, ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೋನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹರಡಿಸಬಾರದು ಎಂದು ಉಪಮುಖ್ಯಮಂತ್ರಿಗಳೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಎಚ್ಚರಿಕೆ ನೀಡಿದ್ದರೂ  ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಸುಳ್ಳು ಸುದ್ದಿ ಹರಡಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಲು  ಕಾರಣವಾಗಿದೆ.ಕೊರೋನಾ ಬಗ್ಗೆ ಈಗಾಗಲೇ ಜನತೆ ಸಾಕಷ್ಟು ಭಯ ಮತ್ತು ಆತಂಕಕ್ಕೆ ಒಳಗಾಗಿರುವಾಗಲೇ ಇಂತಹ ಘಟನೆ ನಡೆದಿರುವುದು ದುರದೃಷ್ಟಕರವಾಗಿದೆ. ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

SCROLL FOR NEXT