ರಾಜ್ಯ

ಜನರಿಗೆ ಅಗತ್ಯ ಆಹಾರ ಒದಗಿಸಲಾಗುತ್ತಿದ್ದು, ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ನರಳುತ್ತಿಲ್ಲ: ಸಿಎಂ ಯಡಿಯೂರಪ್ಪ 

Manjula VN

ಬೆಂಗಳೂರು: ಮನುಕುಲಕ್ಕೆ ಮಾರಕವಾಗಿರುವ ಕೊರೋನಾ ವೈರಸ್ ಮಟ್ಟಹಾಕಲು ರಾಜ್ಯ ಸರ್ಕಾರ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದು, ಪಿಡುಗನ್ನು ಎದುರಿಸಲು ಹೆಣಗಾಡುತ್ತಿದೆ. ಇದರ ನಡುವಲ್ಲೇ ರಾಜ್ಯದಲ್ಲಿ ಆಹಾರ ಕೊರತೆ ಎದುರಾಗಿ ಜನರು ಹಸಿವಿನಿಂದ ನರಳುತ್ತಿದ್ದಾರೆಂಬ ಆರೋಪಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿರಸ್ಕರಿಸಿದ್ದಾರೆ. 

ಈ ಕುರಿತು ಮಾತನಾಡಿರುವ ಅವರು, ರಾಜ್ಯದಲ್ಲಿ ಅಗತ್ಯವಿರುವ ಜನರಿಗೆ ಈಗಾಗಲೇ ಆಹಾರ ಪೂರೈಕೆ ಮಾಡಲಾಗುತ್ತಿದೆ. ಯಾರೊಬ್ಬರೂ ಹಸಿವಿನಿಂದ ಬಳಲುತ್ತಿಲ್ಲ. ಎಲ್ಲಿಯಾದರೂ ಹಸಿವಿನಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದನ್ನು ತೋರಿಸಿ ನೋಡೋಣ. ನಮ್ಮ ನಾಡು ಸಂತರು ಜನಿಸಿದ ನಾಡಾಗಿದ್ದು, ಅನ್ನ ದಾಸೋಹ ನಮ್ಮ ರಕ್ತದಲ್ಲಿಯೇ ಬರೆದಿದೆ ಎಂದು ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗಳ ಮೂಲಕ ಕೇವಲ ಉಚಿತ ಆಹಾರವಷ್ಟನ್ನೇ ಅಲ್ಲದೆ, ಹಲವು ಜಿಲ್ಲೆಗಳಲ್ಲಿ ಬಡವರಿಗೆ ಆಹಾರ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಿಪಿಎಲ್ ಕಾರ್ಡ್ ಇದ್ದವರ ಮನೆಗಳ ಬಳಿಯೇ ಆಹಾರ ಪದಾರ್ಥಗಳನ್ನು ಒದಗಿಸುತ್ತಿದ್ದೇವೆ. ಹಲವು ಸ್ವಸಹಾಯ ಸಂಘಟನಗೆಗಳು ಬಡವರಿಗೆ ಆಹಾರ ನೀಡುತ್ತಿವೆ ಎಂದು ತಿಳಿಸಿದ್ದಾರೆ. 

ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಹೊರಗೆ ಹೋಗುತ್ತಿರುವ ಜನರಿಗೆ ಪೊಲೀಸರು ಶಿಕ್ಷಿಸುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪೊಲೀಸರು ಹಗಲು, ರಾತ್ರಿ ದುಡಿಯುತ್ತಿದ್ದಾರೆ. ಪರಿಸ್ಥಿತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ. 

ಕರ್ಫ್ಯೂ ಜಾರಿ ಮಾಡಿರುವಾಗ ಜನರೇಕೆ ರಸ್ತೆಗಿಳಿಯುತ್ತಿದ್ದಾರೆ? ವಸ್ತುಗಳ ಖರೀದಿ ಮಾಡಲೇಬೇಕಾದರೆ, ಪೊಲೀಸರು ನಿರ್ಬಂದ ಸಡಿಲಗೊಳಿಸಿದ್ದ ಸಂದರ್ಭದಲ್ಲಿ ಖರೀದಿ ಮಾಡಬೇಕು. ನಮ್ಮ ಪೊಲೀಸರು ನಾಗರೀಕ ಹಾಗೂ ಮಾನವೀಯತೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಬಳಿಕ ಲಾಕ್'ಡೌನ್ ಇನ್ನೂ 21 ದಿನಗಳ ಕಾಲ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ದೇವರ ದಯೆಯಿಂದ ಪರಿಸ್ಥಿತಿ ಆ ಮಟ್ಟಕ್ಕೆ ಹೋಗದಿರಲಿ ಎಂದು ಪ್ರಾರ್ಥಿಸುತ್ತೇನೆ. ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸಿದ್ಧರಿದ್ದೇವೆಂದುತಿಳಿಸಿದ್ದಾರೆ. 

SCROLL FOR NEXT