ರಾಜ್ಯ

ಲಾಕ್ ಡೌನ್ ಮಧ್ಯೆ ಅವಳಿ ಮಕ್ಕಳಿಗೆ 'ಆನ್ ಲೈನ್ ನಾಮಕರಣ' ನೆರವೇರಿಸಿದ ಬೆಂಗಳೂರು ದಂಪತಿ

Sumana Upadhyaya

ಬೆಂಗಳೂರು: ಕೊರೋನಾ ವೈರಸ್ ನಿಂದ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ಶುಭ ಸಮಾರಂಭಗಳನ್ನು ಜನರು ಮುಂದೂಡುತ್ತಿದ್ದಾರೆ, ಆದರೆ ಬೆಂಗಳೂರಿನ ವೈಟ್ ಫೀಲ್ಡ್ ನ ದಂಪತಿ ತಮ್ಮ ಅವಳಿ ಮಕ್ಕಳ ನಾಮಕರಣ ಸಮಾರಂಭವನ್ನು ಆನ್ ಲೈನ್ ಮೂಲಕ ನಡೆಸಿದ್ದು ಜೈಪುರ, ಕೋಲ್ಕತ್ತಾ, ಇಟಾನಗರದಲ್ಲಿದ್ದ ಇವರ ಕುಟುಂಬ ಸದಸ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು,

ಪ್ರವೀಣ್ ಜೈನ್ ಎಂಬ ಪುರೋಹಿತರು ಕಳೆದ 18 ವರ್ಷಗಳಿಂದ ಹಲವು ನಾಮಕರಣಗಳನ್ನು ನಡೆಸಿಕೊಟ್ಟಿದ್ದಾರೆ. ಆದರೆ ಮೊನ್ನೆ ಭಾನುವಾರ ನಡೆಸಿದ ನಾಮಕರಣ ಸಮಾರಂಭದಷ್ಟು ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ಅವರ ಪೌರೋಹಿತ್ಯ ವೃತ್ತಿಯಲ್ಲಿ ಇದುವರೆಗೆ ಆಗಲಿಲ್ಲವಂತೆ.

ವೈಟ್ ಫೀಲ್ಡ್ ನಲ್ಲಿ ನೆಲೆಸಿರುವ ಸಚಿನ್ ಸೇತಿ ಮತ್ತು ಅಮಿತಾ ಜೈನ್ ದಂಪತಿ ತಮ್ಮ ಅವಳಿ ಮಕ್ಕಳಿಗೆ ನಾಮಕರಣ ಮಾಡಿಸಿಕೊಡಬೇಕೆಂದು ಕೇಳಿಕೊಂಡರಂತೆ. ಅದರಂತೆ ಕಳೆದ ಭಾನುವಾರ ವಿಡಿಯೊ ಕಾನ್ಫರೆನ್ಸ್ ಆಪ್ ಮೂಲಕ ಪ್ರವೀಣ್ ಜೈನ್ ಮಾಡಿಸಿಕೊಟ್ಟರು.

ಕೊರೋನಾ ವೈರಸ್ ನಿಂದ ತಮ್ಮ ಪುಟ್ಟ ಕಂದಮ್ಮಗಳ ನಾಮಕರಣ ಸಮಾರಂಭವನ್ನು ಈ ದಂಪತಿ ಹಲವು ಬಾರಿ ಮುಂದೂಡಿದ್ದರು,ಕೊನೆಗೂ ಕಳೆದ ಭಾನುವಾರ ಮಾಡಿಸಿದರು. ಅವಳಿ ಮಕ್ಕಳಿಗೆ ಅವ್ಯುಕ್ತ್ ಮತ್ತು ಅವ್ಯಾನ್ ಎಂದು ಹೆಸರಿಟ್ಟು ಕಾರ್ಯಕ್ರಮ ಪೂರೈಸಿ ಸಂತೋಷಪಟ್ಟರು.

ನಾವು ನಮ್ಮ ಮಕ್ಕಳಿಗೆ ಮಾರ್ಚ್ 22ರಂದು ನಾಮಕರಣ ಮಾಡಬೇಕೆಂದು ದಿನಾಂಕ ನಿಗದಿ ಮಾಡಿದ್ದೆವು. ಅಂದು ಜನತಾ ಕರ್ಫ್ಯೂ ಆಯಿತು. ನಂತರ ಮಾರ್ಚ್ 25ಕ್ಕೆ ಮುಂದೂಡಲ್ಪಟ್ಟಿತು, ಅಂದಿನಿಂದ ಲಾಕ್ ಡೌನ್ ಜಾರಿಗೆ ಬಂತು. ಫೆಬ್ರವರಿ 1ರಂದು ನಮ್ಮ ಮಕ್ಕಳು ಹುಟ್ಟಿದ್ದರು, ಈಗಾಗಲೇ ತುಂಬ ದಿನ ಕಳೆದಿತ್ತು. ತಡ ಮಾಡುವುದು ಬೇಡವೆಂದು ಆನ್ ಲೈನ್ ಮೂಲಕ ಮಾಡಿದೆವು ಎನ್ನುತ್ತಾರೆ ಪುಟ್ಟ ಮಕ್ಕಳ ತಾಯಿ ಅಮಿತಾ ಜೈನ್.

ಆನ್ ಲೈನ್ ನಲ್ಲಿ ಕಾರ್ಯಕ್ರಮ ಮಾಡಿದ್ದು ಹೇಗೆ?:ನಮ್ಮ ಮನೆಯಲ್ಲಿ 60 ವರ್ಷಕ್ಕೆ ಮೇಲ್ಪಟ್ಟವರು ಇರುವುದರಿಂದ ಲಾಕ್ ಡೌನ್ ಮುಗಿದ ನಂತರ ಕೂಡ ಎಲ್ಲರನ್ನೂ ಬರಲು ಹೇಳಿ ಕಾರ್ಯಕ್ರಮ ಮಾಡುವುದು ಕಷ್ಟ. ಹಾಗೆಂದು ನಾಲ್ಕೈದು ಮಂದಿ ಕೂತು ಮಾಡುವುದು ಕೂಡ ತಮಾಷೆಯಾಗುತ್ತದೆ.ವಿಡಿಯೊ ಕಾಲ್ ಮೂಲಕ ಸಮೀಪದ ಬಂಧುಗಳು ಮತ್ತು ಸ್ನೇಹಿತರನ್ನು ಆನ್ ಲೈನ್ ಗೆ ಬರುವಂತೆ ಕೇಳಿಕೊಂಡೆವು, ಪುರೋಹಿತರು ಒಪ್ಪಿಕೊಂಡರು. ವಿಡಿಯೊ ಕಾನ್ಫರೆನ್ಸ್ ಆಪ್ ಚಾಲನೆಗೆ ಇಟ್ಟೆವು. ಬೆಳಗ್ಗೆ 8.30ಕ್ಕೆ ಆರಂಭವಾದ ಕಾರ್ಯಕ್ರಮ ಒಂದು-ಒಂದೂವರೆ ಗಂಟೆಯಲ್ಲಿ ಮುಗಿದುಹೋಯಿತು. 25ರಿಂದ 28 ಮಂದಿ ಆನ್ ಲೈನ್ ನಲ್ಲಿ ದೂರದೂರುಗಳಿಂದಲೂ ಕಾರ್ಯಕ್ರಮ ವೀಕ್ಷಿಸಿ ನಮಗೆ ಮಕ್ಕಳಿಗೆ ಆಶೀರ್ವಾದ ಮಾಡಿದರು ಎಂದರು ಅಮಿತಾ .

ಸಾಮಾಜಿಕ ಅಂತರ ಕಾಯ್ದುಕೊಳ್ಳಲು 2 ಕಿಲೋ ಮೀಟರ್ ದೂರದಲ್ಲಿದ್ದ ಸ್ನೇಹಿತರು ಕೂಡ ಆನ್ ಲೈನ್ ನಲ್ಲಿ ವೀಕ್ಷಿಸಿದರೆ ಹೊರತು ಮನೆಗೆ ಬರಲಿಲ್ಲ ಎನ್ನುತ್ತಾರೆ ಸಚಿನ್ ಸೇತಿ. ಅವರು ಡೆಲ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರವೀಣ್ ಜೈನ್ ಮಾತ್ರವಲ್ಲದೆ ಬಿಹಾರದ ಅರ್ಚಕರೊಬ್ಬರು ಸಹ ಭಾಗಿಯಾಗಿದ್ದರು. ಸಚಿನ್ ಅವರು ವಾಟ್ಸಾಪ್ ಗ್ರೂಪ್ ರಚನೆ ಮಾಡಿ ಅದರಲ್ಲಿದ್ದ ಪ್ರತಿ ಸದಸ್ಯರ ಜೊತೆ 15 ನಿಮಿಷ ಕಳೆದು ಜೂಮ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಲು ಹೇಳಿ ಅದರ ಮೂಲಕ ವಿಡಿಯೊ ಕಾನ್ಫರೆನ್ಸ್ ಮಾಡುವುದು ಹೇಗೆ ಎಂದು ತಿಳಿಸಿಕೊಟ್ಟರು. ಸಚಿನ್ ಅವರ ತಂದೆ ಓಂ ಪ್ರಕಾಶ್ ಸೇತಿ ಅವರಿಗೆ ಸಹ ಕಾರ್ಯಕ್ರಮ ಮುಗಿದ ಖುಷಿ ಹಂಚಿಕೊಂಡರು.

ಈ ಕಾರ್ಯಕ್ರಮದ ಬಳಿಕ ಪ್ರವೀಣ್ ಜೈನ್ ಅವರಿಗೆ ಭಕ್ತರಿಂದ ಆನ್ ಲೈನ್ ನಲ್ಲಿ ನಾಮಕರಣ ಮಾಡಿಸಿಕೊಡುತ್ತೀರಾ ಎಂದು ಕೇಳಿಕೊಂಡು 12 ಕರೆಗಳು ಬಂದಿವೆಯಂತೆ. ದೇವಸ್ಥಾನ ಬಾಗಿಲು ಹಾಕಿರುವುದರಿಂದ ಆನ್ ಲೈನ್ ಮೂಲಕ ಪೂಜೆ ಮಾಡಬಹುದು ಎಂಬ ಯೋಚನೆಯಲ್ಲಿ ಅವರು ಈಗಿದ್ದಾರೆ.

SCROLL FOR NEXT