ರಾಜ್ಯ

ಕೊರೋನಾ: ದಕ್ಷಿಣ ಕನ್ನಡದಲ್ಲಿ 3ನೇ ಸಾವು, ಬಂಟ್ವಾಳ ಮೂಲದ ಮಹಿಳೆ ಮಹಾಮಾರಿಗೆ ಬಲಿ

Manjula VN

ಮಂಗಳೂರು: ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಮೂಲದ 67 ವರ್ಷದ ಮಹಿಳೆಯೊಬ್ಬರು ಗುರುವಾರ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದರೊಂದಿಗೆ ಕೊರೋನಾ ವೈರಸ್'ನ ಕರಿಛಾಯೆ ಆವರಿಸಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 

ಮೃತಪಟ್ಟ ಮೂರೂ ಮಂದಿ ಕೂಡ ಬಂಟ್ವಾಳ ಕಸಬಾದ ಆಸುಪಾಸಿನ ಮನೆಯವರು ಎಂಬುದು ಗಮನಾರ್ಹ ವಿಚಾರವಾಗಿದೆ. 

ಕೆಲವು ದಿನಗಳಿಂದ ಕೆಮ್ಮು, ಜ್ವರ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಏ.18 ರಂದು ಮಂಗಳೂರಿನ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಅಲ್ಲಿ ನ್ಯುಮೋನಿಯಾಗೆ ಚಿಕಿತ್ಸೆ ನೀಡಲಾಗಿದ್ದು, ಮಧುಮೇಹ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುತ್ತಿದ್ದ ಈಕೆಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಏ.20ರಂದು ನಡೆಸಿದ ಈಕೆಯ ಗಂಟಲು ದ್ರವ ಸ್ಯಾಂಪಲ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. 

ಇದರಿಂದಾಗಿ ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಈಕೆ ಗುರುವಾರ ಸಂಜೆ ಮೃತಪಟ್ಟರು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. 

SCROLL FOR NEXT