ಬೆಂಗಳೂರು: ಕೋವಿಡ್ 19 ಸೋಂಕಿನಿಂದ ದೇಶಾದ್ಯಂತ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗಿದ್ದು, ಇದರಿಂದ ದುಡಿದು ತಿನ್ನುವ ಕಾರ್ಮಿಕ ಬಂಧುಗಳು ಹೆಚ್ಚಿನ ತೊಂದರೆ ಅನುಭವಿಸಬೇಕಾಯಿತು. ಇಂತಹ ಕಠಿಣ ಸಂದರ್ಭದಲ್ಲಿ ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಹೇಳಿಕೆ ಪ್ರಕಟಿಸಿರುವ ಅವರು, ನಿಮ್ಮೆಲ್ಲರ ಸಹಕಾರದಿಂದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಶೀಘ್ರದಲ್ಲಿಯೇ ಆರ್ಥಿಕ ಚಟುವಟಿಕೆಗಳು ಮತ್ತೆ ಪ್ರಾರಂಭವಾಗುವ ನಿರೀಕ್ಷೆ ಇದೆ.
ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ವಾಣಿಜ್ಯೋದ್ಯಮಿಗಳೊಂದಿಗೆ ಸಭೆ ನಡೆಸಿದ್ದು, ಕಾರ್ಮಿಕರ ಹಿತ ಕಾಯುವ ಹಾಗೂ ವೇತನ ಪಾವತಿ ಮಾಡುವಂತೆ ಮನವಿ ಮಾಡಿದೆ. ಆದ್ದರಿಂದ ವಲಸೆ ಕಾರ್ಮಿಕರು ಆತಂಕಕ್ಕೆ ಒಳಗಾಗದೆ ಕೇಂದ್ರ ಸರ್ಕಾರದ ಸೂಚನೆ ಬಂದೊಡನೆ ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆ ಪುನರಾರಂಭ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.