ರಾಜ್ಯ

ಮುಂಬಯಿಯಲ್ಲಿ ಸತ್ತ ಮಂಡ್ಯ ವ್ಯಕ್ತಿಯ 3 ಸಂಬಂಧಿಕರಿಗೆ ಕೊರೋನಾ: 20 ಚೆಕ್ ಪೋಸ್ಟ್ ಸಂಪರ್ಕಿಸಿದ್ದ ಆ್ಯಂಬುಲೆನ್ಸ್

Shilpa D

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿಯೂ ಕೊರೋನಾ ತನ್ನ ಅಟ್ಟಹಾಸ ಮುಂದುವರಿಸಿದೆ. ಶುಕ್ರವಾರ 8 ಹೊಸ ಪ್ರಕರಣಗಳು ದಾಖಲಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಮೈಸೂರು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಮುಂಬಯಿಯಿಂದ ತಂದ ವ್ಯಕ್ತಿಯ ಶವದ ಜೊತೆ ಕೊರೋನಾವನ್ನು ಕರೆತರಲಾಗಿದೆ.

ಮುಂಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವ ತಂದು ಮೇಲುಕೋಟೆ ಬಳಿಯ ಕೊಡಗಳ್ಳಿಯಲ್ಲಿ ಏಪ್ರಿಲ್ 24ರಂದು ಸಂಸ್ಕಾರ ಮಾಡಲಾಗಿತ್ತು. ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದೆ. ಜೊತೆಗೆ ಮೃತಪಟ್ಟ ವ್ಯಕ್ತಿಯ ಮಗ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಎರಡೂವರೆ ವರ್ಷದ ಮೊಮ್ಮಗನಲ್ಲಿ ಸೋಂಕು
ಪತ್ತೆಯಾಗಿದೆ.

 1023 ಕೀ ಮೀ ಸಂಚರಿಸಿದ ಕುಟುಂಬ 20 ಚೆಕ್ ಪೋಸ್ಟ್ ಗಳನ್ನು ದಾಟಿ ಮಂಡ್ಯ ತಲುಪಿ ಅಂತ್ಯ ಸಂಸ್ಕಾರ ನೆರವೇರಿಸಿತ್ತು. ಏಪ್ರಿಲ್ 23 ರಂದು ಮುಂಬೈನ ವಿಎನ್ ದೇಸಾಯಿ  ಮುನ್ಸಿಪಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ 53 ವರ್ಷದ ಆಟೋ ಚಾಲಕ ಮೃತಪಟ್ಟಿದ್ದ,

ಅದೇ ದಿನ ಆತನ ಪತ್ನಿ, ಮಗ ಮತ್ತು ಮಗಳು ಹಾಗೂ ಆಕೆಯ ಮಗು ಸರ್ಕಾರಿ ಆ್ಯಂಬುಲೆನ್ಸ್ ನಲ್ಲಿ  ಮುಂಬಯಿಂದ ತೆರಳಿದ್ದರು. ಬರುವಾಗ ದಾರಿ ಮಧ್ಯ ಹಲವು ಸ್ಥಳಗಳಲ್ಲಿ ವಾಹನ ನಿಲ್ಲಿಸಿ ತಮ್ಮ ಸಂಬಂಧಿಕರು ಅಂತಿಮ ನಮನ ಸಲ್ಲಿಸಿದ್ದರು. 

ಮುಂಬಯಿಯ ಕೋವಿದ್ ಆಸ್ಪತ್ರೆಯಿಂದ ಶವವನ್ನು ಮಂಡ್ಯಕ್ಕೆ ತರಲಾಗುತ್ತಿದೆ ಎಂಬ ವಿಷಯ ತಿಳಿದ ಶಾಸಕ ಸಿಎಸ್ ಪುಟ್ಟರಾಜು ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡದಂತೆ ವಿರೋಧ ವ್ಯಕ್ತ ಪಡಿಸಿದ್ದರು. ಹೀಗಾಗಿ ಪಾಂಡವಪುರ- ಕೆಆರ್ ಪೇಟೆ ಗಡಿ ಪ್ರದೇಶದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. 

ಮೃತ ವ್ಯಕ್ತಿಯ 25 ವರ್ಷದ ಮಗ, 24 ವರ್ಷದ ಮಗಳು ಮತ್ತು ಆಕೆಯ 2 ವರ್ಷದ ಮಗುವಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ಆದರೆ ಮೃತ ವ್ಯಕ್ತಿಯ ಪತ್ನಿಯಲ್ಲಿ ಕೊರೋನಾ ಕಂಡು ಬಂದಿಲ್ಲ.2 ವರ್ಷದ ಮಗುವಿನ ಸಂಪರ್ಕದಲ್ಲಿದ್ದ ಕೆಆರ್ ಪೇಟೆಯ 30 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.ಇದು ಪಾಂಡವಪುರ ಮತ್ತು ಕೆ ಆರ್ ಪೇಟೆ ತಾಲೂಕುಗಳಲ್ಲಿ ತೀವ್ರ ಆತಂಕ ಮೂಡಿಸಿದೆ.  

ಅಂತ್ಯ ಸಂಸ್ಕಾರ ನಡೆಸಲು ಸಹಕರಿಸಿದ ಪೌರ ಕಾರ್ಮಿಕರಲ್ಲಿ ದುಗುಡ ಹೆಚ್ಚಿಸಿದೆ. ಮುಂಬೈನ ಖಾಸಗಿ ಬ್ಯಾಂಕಿನ ಸಾಲ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮೃತನ ಮಗ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿರಬಹುದು ಎಂದು ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದ್ದಾರೆ.

ಆಟೋ ಡ್ರೈವರ್ ಅಥವಾ ಅವರ ಕುಟುಂಬ ಸದಸ್ಯರಲ್ಲಿ ಯಾರಾದರೂ ಕೋವಿಡ್-ಪಾಸಿಟಿವ್ ಎಂದು ಪರೀಕ್ಷಿಸಲಾಗಿದೆಯೇ ಎಂದು ಕಂಡುಹಿಡಿಯಲು ಅವರು ಮುಂಬಯಿಯಿಂದ ವೈದ್ಯಕೀಯ ವರದಿಗಳನ್ನು ಕೋರಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಇಂದು ಒಂದೇ ದಿನ ಎಂಟು ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಳವಳ್ಳಿ ಪಟ್ಟಣವೊಂದರಲ್ಲೇ 19 ಮಂದಿಗೆ ಕೊರೊನಾ ಬಂದಿದೆ. ಮಂಡ್ಯ ಜಿಲ್ಲೆಯ ಸೋಂಕಿತರ ಸಂಖ್ಯೆಯಲ್ಲಿ ಇದ್ದಕ್ಕಿದ್ದಂತೆ ಏರಿಕೆಯಾಗಿದ್ದು, ಮತ್ತೆ ಭೀತಿ ಹುಟ್ಟಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26ಕ್ಕೆಏರಿದ್ದರಿಂದಾಗಿ ಆರೆಂಜ್ ಝೋನ್‌ ನಲ್ಲಿದ್ದ ಮಂಡ್ಯ ಈಗ ರೆಡ್‌ ಝೋನ್‌ ಗೆ ಸೇರಿದೆ.

SCROLL FOR NEXT