ರಾಜ್ಯ

ರಾಜ್ಯದಲ್ಲಿ ಮತ್ತೆ 8 ಹೊಸ ಕೊರೋನಾ ಪ್ರಕರಣ: ಸೋಂಕಿತರ ಸಂಖ್ಯೆ 659ಕ್ಕೆ ಏರಿಕೆ, ವಿಜಯಪುರದಲ್ಲಿ ವೃದ್ಧೆ ಸಾವು

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಭಾವ ಹೆಚ್ಚಾಗುತ್ತಲೇ ಇದ್ದು, ಮಂಗಳವಾರ ಮತ್ತೆ 8 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 659ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 

ಸೋಂಕು ಕಾಣಿಸಿಕೊಂಡಿರುವ 659 ಮಂದಿಯ ಪೈಕಿ 28 ಮಂದಿ ಸಾವಿಗೀಡಾಗಿದ್ದು, 324 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಇದರಲ್ಲಿ ಬೆಂಗಳೂರು ನಗರದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಇನ್ನುಳಿದಂತೆ ಬಾಗಕೋಟೆಯಲ್ಲಿ 2, ಬಳ್ಳಾರಿ 1, ದಕ್ಷಿಣ ಕನ್ನಡದಲ್ಲಿ 1 ಮತ್ತು  ಉತ್ತರ ಕನ್ನಡದ ಭಟ್ಕಳದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. 

ವಿಜಯಪುರದಲ್ಲಿ ವೃದ್ಧೆ ಸಾವು:
ರಾಜ್ಯದಲ್ಲಿ ಮಂಗಳವಾರ 640ನೇ ಕೊರೊನಾ ಪೀಡಿತ 62 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಇದರಿಂದ ವಿಜಯಪುರ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಮೂರಕ್ಕೆ‌ ಏರಿಕೆ ಆಗಿದೆ.

ಸೋಂಕಿತರು ಈ ಮೊದಲೇ ಮಧುಮೇಹ, ಹೃದಯ ಸಂಬಂಧಿ‌ ಖಾಯಿಲೆಯಿಂದ ಬಳಲುತ್ತಿದ್ದರು. ರೋಗಿ ಸಂಖ್ಯೆ 228 ಸಂಪರ್ಕದಿಂದ ಮೃತ ಮಹಿಳೆಗೆ ಸೋಂಕು ತಗುಲಿತ್ತು.

ಆಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿದ್ದ ಮಹಿಳೆಗೆ ಸೋಮವಾರ ಕೊರೊನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.

SCROLL FOR NEXT