ರಾಜ್ಯ

ವಿವಿಧ ಸಮುದಾಯಗಳ ಮುಖಂಡರಿಂದ ಸಿದ್ದರಾಮಯ್ಯ ಭೇಟಿ: ಸರ್ಕಾರದ ನಡೆಗೆ ಅಸಮಾಧಾನ

Nagaraja AB

ಬೆಂಗಳೂರು: ಕೊರೋನಾ ವಿಶೇಷ ಪ್ಯಾಕೇಜ್ ಅಡಿ ಸರ್ಕಾರ ಕೇವಲ‌ ಆಟೋ,‌ ಟ್ಯಾಕ್ಸಿ ಚಾಲಕರಿಗೆ‌, ಸವಿತಾ, ಮಡಿವಾಳ, ನೇಕಾರರಿಗೆ ಮಾತ್ರ ಸಹಾಯಧನ ಪ್ರಕಟಿಸಿದ್ದಕ್ಕೆ ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿರುವ ವಿವಿಧ ಸಮುದಾಯಗಳನ್ನು ಕಡೆಗಣಿಸಿರುವುದಕ್ಕೆ‌ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಅಖಿಲ ಕರ್ನಾಟಕ ಗಾಣಿಗ ಮಹಾಸಭಾ, ಭಾವಸಾರ ಕ್ಷತ್ರಿಯ ಸಮಾಜ (ದರ್ಜಿಗಳು) ವಿಶ್ವಕರ್ಮ ಸೇವಾ ಸಮಿತಿ, ಸೋಮವಂಶ ಆರ್ಯ ಕ್ಷತ್ರಿಯ ಸೇವಾ ಸಂಘ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಮಹಾ ಒಕ್ಕೂಟ, ಅಲೆಮಾರಿಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಪತ್ರಗಳನ್ನು ಸಲ್ಲಿಸಿದರು.

ಕೊರೊನಾ ಪ್ಯಾಕೇಜ್‍ನಲ್ಲಿ ಸರ್ಕಾರ ತಮ್ಮನ್ನು ಕಡೆಗಣಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು, ಮುಖ್ಯಮಂತ್ರಿಗಳು ನಿನ್ನೆ ಘೋಷಣೆ ಮಾಡಿರುವ ಪ್ಯಾಕೇಜ್‍ನಲ್ಲಿ ಸವಿತಾ ಸಮಾಜ, ನೇಕಾರರು ಹಾಗೂ ಮಡಿವಾಳ ಸಮುದಾಯದವರಿಗೆ ಮಾತ್ರ ನೆರವು ಘೋಷಣೆ ಮಾಡಿದ್ದಾರೆ. ಆದರೆ, ಆ ವರ್ಗದವರಿಗೂ ನೆರವು ಸೂಕ್ತ ಪ್ರಮಾಣದಲ್ಲಿ ಸಿಕ್ಕಿಲ್ಲ ಎಂದು ಮುಖಂಡರು ಹೇಳಿದರು. 

ಕಬ್ಬಿಣ ಕೆಲಸಗಾರರು, ಕಲ್ಲಿನ ವಿಗ್ರಹ ತಯಾರು ಮಾಡುವವರು, ಚಿನ್ನ, ಬೆಳ್ಳಿ ಕೆಲಸದಲ್ಲಿರುವವರು, ಎರಕದ ಕೆಲಸಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಮರಗೆಲಸ, ಗೊಂಬೆಗಳಿಗೆ ಬಣ್ಣ ಹಚ್ಚುವವರು, ಕರಕುಶಲ ಕೆಲಸದವರಿಗೆ ನೆರವು ನೀಡಬೇಕು. ಲಕ್ಷಾಂತರ ಸಂಖ್ಯೆಯಲ್ಲಿರುವ‌ ದರ್ಜಿಗಳಿಗೆ ಸಹಾಯಧನ, ಶುದ್ಧ ಎಣ್ಣೆ ತಯಾರು ಮಾಡುವ ಗಾಣಿಗರಿಗೆ ಆರ್ಥಿಕ ನೆರವು ಹಾಗೂ ವಿದ್ಯುತ್ ಮಗ್ಗಗಳನ್ನು ಹೊಂದಿರುವ ನೇಕಾರರನ್ನು ಪ್ಯಾಕೇಜ್‍ನಲ್ಲಿ ಸೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಸಿದ್ದರಾಮಯ್ಯಗೆ ಮನವಿ ಮಾಡಲಾಯಿತು.

ವಿದ್ಯುತ್ ಮಗ್ಗ ನೇಕಾರರು, ಗಾಣಿಗರು, ಕುಂಬಾರ, ಕಮ್ಮಾರ, ಮೇದರು, ದರ್ಜಿಗಳು, ವಿಶ್ವಕರ್ಮ, ಅಲೆಮಾರಿಗಳು, ಬುಡಕಟ್ಟು ಸಮುದಾಯ, ಉಪ್ಪಾರರು, ಅರ್ಚಕರು, ಮಂಗಳವಾದ್ಯ ನುಡಿಸುವವರು, ಕಲಾವಿದರು, ಛಾಯಾಗ್ರಾಹಕರನ್ನು ಕೊರೋನಾ ಪ್ಯಾಕೇಜ್‍ನಲ್ಲಿ ಸೇರಿಸದಿರುವ ಬಗ್ಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರ ಎಂ.ಡಿ. ಲಕ್ಷ್ಮಿನಾರಾಯಣ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಇನ್ನು ಸವಿತಾ ಸಮಾಜ, ನೇಕಾರರು ಹಾಗೂ ಮಡಿವಾಳ ಸಮುದಾಯದವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸರ್ಕಾರದಿಂದ ನೆರವು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

SCROLL FOR NEXT