ರಾಜ್ಯ

ಕೊಪ್ಪಳಕ್ಕೂ ಬಂತು ಕೊರೋನಾ ಭೀತಿ!

Srinivas Rao BV

ಕೊಪ್ಪಳ: ಹಸಿರು ವಲಯದಲ್ಲಿರುವ ಕೊಪ್ಪಳದಲ್ಲಿ ಈವರೆಗೆ 970 ಕೊವಿಡ್-19 ಪರೀಕ್ಷೆ ನಡೆಸಲಾಗಿದ್ದು ಎಲ್ಲ ನೆಗೆಟಿವ್ ರಿಜಲ್ಟ್ ಬಂದಿವೆ. ಆದರೆ ಪಕ್ಕದ ಬಾಗಲಕೋಟೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಧ್ಯೆಯೂ ನಡೆದ ಮದುವೆಯೊಂದು ಕೊಪ್ಪಳಕ್ಕೂ ಕೊರೋನಾ ಹಬ್ಬುವ ಗುಮ್ಮ ತಂದಿಟ್ಟಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಮೇ 6 ರಂದು 13 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಅವರ ಪೈಕಿ ಸೋಂಕು ದೃಢಪಟ್ಟಿರುವ ವ್ಯಕ್ತಿಯೊಬ್ಬನ ಮಗಳ ಮದುವೆ ಈಚೆಗೆ ನಡೆದಿತ್ತು. ಆ ಮದುವೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೊಗಲ್ ಗ್ರಾಮದ ಸುಮಾರು 20 ಜನರು ಪಾಲ್ಗೊಂಡಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನರಿತ ಜಿಲ್ಲಾಡಳಿತ ತಕ್ಷಣವೇ ಅಧಿಕಾರಿಗಳ ತಂಡವನ್ನು ನಿಲೋಗಲ್ ಗ್ರಾಮಕ್ಕೆ ಕಳುಹಿಸಿ, ಮದುವೆಯಲ್ಲಿ ಪಾಲ್ಗೊಂಡಿದ್ದ 13 ಜನರನ್ನು ಕ್ವಾರಂಟೈನ್ ಮಾಡಿದೆ. ಸದ್ಯದ ಅಪ್ಡೇಟ್ ಪ್ರಕಾರ ನಿಲೋಗಲ್ ಗ್ರಾಮದ 13 ಜನರನ್ನು ಕೊಪ್ಪಳದ ಕೊವಿಡ್-19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಅವರ ಗಂಟಲು ದ್ರವ ಸ್ಯಾಂಪಲ್‌ನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಇಂದು ರಾತ್ರಿಯೊಳಗೆ ಸ್ಯಾಂಪಲ್‌ಗಳ ರಿಜಲ್ಟ್ ಬರುವ ಸಾಧ್ಯತೆ ಇದೆ.

ಈವರೆಗೂ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಜಿಲ್ಲೆಯ ಜನರು ಆತಂಕಕ್ಕೊಳಗಾಗಬೇಡಿ. ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಮನವಿ ಮಾಡಿದ್ದಾರೆ.

SCROLL FOR NEXT