ರಾಜ್ಯ

ಬರೋಬ್ಬರಿ 498 ಮಂದಿಗೆ ವೈರಸ್ ಹರಡಿದ 13 ಮಂದಿ ಕೊರೋನಾ ಸೋಂಕಿತರು!

Manjula VN

ಬೆಂಗಳೂರು: ರಾಜ್ಯದಲ್ಲಿ ಬರೋಬ್ಬರಿ 498 ಮಂದಿಗೆ ವೈರಸ್ ಹರಡಲು ಕಾರಣರಾದ 13 ಮಂದಿ ಕೊರೋನಾ ಸೋಂಕಿತರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಗುರ್ತಿಸಿದ್ದಾರೆ. 

ಪ್ರಸ್ತುತ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 710ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಈಗಾಗಲೇ 366 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ  ನೀಡಿರುವ ಪ್ರಕಾರ ಮೇ.7 ರವರೆಗೆ ನಂಜನಗೂಡು ಔಷಧಿ ಕಂನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋಂಕಿತ ವ್ಯಕ್ತಿಯೊಬ್ಬನಿಂದಲೇ ಸುಮಾರು 76 ಮಂದಿಗೆ ವೈರಸ್ ಹರಡಿದೆ ಎಂದು ತಿಳಿಸಿದೆ. 

ಇನ್ನು ವಿಜಯಪುರದ 60 ವರ್ಷದ ಮಹಿಳೆಯಿಂದ 37 ಮಂದಿಗೆ ಸೋಂಕು ಹರಡಿದೆ. ಬೆಳಗಾವಿ ಮೂಲಕ 20 ವರ್ಷದ ಯುವಕನಿಂದ 36 ಜನರಿಗೆ ಸೋಂಕು ಹರಡಿದೆ. 

ಒಬ್ಬ ಸೋಂಕಿತ ವ್ಯಕ್ತಿಯಿಂದ ನೇರ ಹಾಗೂ ಪರೋಕ್ಷವಾಗಿ 48 ಮಂದಿಗಾದರೂ ಸೋಂಕು ತಗುಲಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊರೋನಾ ವಾರ್ ರೂಮ್ ಮತ್ತು ಸೋಂಕು ಪತ್ತೆ ತಂಡದ ಉಸ್ತವಾರಿ ವಹಿಸಿರುವ ಐಎಎಸ್ ಅಧಿಕಾರಿ ಮುನೀಶ್ ಮುದ್ಗಿಲ್ ಅವರು, ತಾವು ಇತರರಿಗೂ ವೈರಸ್ ಹರಡುತ್ತಿದ್ದೇವೆಂಬ ವಿಚಾರ ಸೋಂಕಿತ ವ್ಯಕ್ತಿಗಳಿಗೆ ತಿಳಿದಿರುವುದಿಲ್ಲ ಎಂದಿದ್ದಾರೆ. 

23 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಆದರೆ, ಆತನಲ್ಲಿ ವೈರಸ್ ಕುರಿತ ಯಾವುದೇ ಲಕ್ಷಣಗಳೂ ಪತ್ತೆಯಾಗಿರಲಿಲ್ಲ. ಇದರಿಂದಾಗಿ ಆತನಿಗೆ ತಿಳಿಯದಂತೆಯೇ 20 ಮಂದಿಗೆ ಸೋಂಕು ಹರಡಿದೆ. 65 ವರ್ಷದ ಸೋಂಕಿತ ಮತ್ತೊಬ್ಬ ವ್ಯಕ್ತಿ ಮಧುಮೇಹ ರೋಗದಿಂದ ಬಳಲುತ್ತಿದ್ದಾರೆ. ವೈರಸ್ ದೃಢಪಡುತ್ತಿದ್ದಂತೆಯೇ ಆತನೊಂದಿಗೆ ಸಂಪರ್ಕದಲ್ಲಿದ್ದ 20ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ನಲ್ಲಿರಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT