ರಾಜ್ಯ

ವಂದೇ ಭಾರತ್ ಮಿಷನ್: ಕನ್ನಡಿಗರ ಹೊತ್ತ ಏರ್ ಇಂಡಿಯಾ ವಿಮಾನ ಲಂಡನ್ ನಿಂದ ಮೇ.11ರಂದು ಬೆಂಗಳೂರಿಗೆ!

Srinivasamurthy VN

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಲಂಡನ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು ಹೊತ್ತ ಏರ್ ಇಂಡಿಯಾ ವಿಮಾನ ಇದೇ ಮೇ 11ರಂದು ಬೆಂಗಳೂರಿಗೆ ಬಂದಿಳಿಯಲಿದೆ.

ಬ್ರಿಟನ್ ನಲ್ಲಿ ಸಂಕಷ್ಷಕ್ಕೆ ಸಿಲುಕಿರುವ ಕನ್ನಡಿಗರೂ ಸೇರಿದಂತೆ ಸುಮಾರು 340 ಮಂದಿ ಭಾರತೀಯರನ್ನು ಹೊತ್ತ ಬೋಯಿಂಗ್ 777 ಏರ್ ಇಂಡಿಯಾ ವಿಮಾನ ಮೇ11ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಆ ಮೂಲಕ ಕೊರೋನಾ  ಸಾಂಕ್ರಾಮಿಕ ಸಂದರ್ಭದಲ್ಲಿ ಭಾರತ ಸರ್ಕಾರ ಕೈಗೆತ್ತಿಕೊಂಡಿರುವ ಬೃಹತ್ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಬೆಂಗಳೂರಿನಲ್ಲಿ ಇಳಿದ ಮೊದಲ ವಿಮಾನವಾಗಲಿದೆ. ಮೇ11ರ ಬೆಳಗ್ಗೆ ಸುಮಾರು 3 ಗಂಟೆಗೆ ವಿಮಾನ ಲ್ಯಾಂಡ್ ಆಗಲಿದ್ದು, ಎಲ್ಲ 340 ಭಾರತೀಯರನ್ನೂ  ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಮಾಡಲಾಗುತ್ತದೆ. 

ಇನ್ನು ಮೂಲಗಳ ಪ್ರಕಾರ ಭಾರತ ಸರ್ಕಾರದ ಈ ಕಾರ್ಯಚರಣೆಯಲ್ಲಿ ವಿವಿಧ ದೇಶಗಳಲ್ಲಿರುವ ಸುಮಾರು 800 ಮಂದಿ ಕರ್ನಾಟಕ ಮೂಲದವರು ಮೂರು ವಿಮಾನಗಳಲ್ಲಿ ನಗರಕ್ಕೆ ವಾಪಸ್ ಆಗಲಿದ್ದಾರೆ. ವಿದೇಶಗಳಲ್ಲಿರುವ 10,800 ಮಂದಿ ಭಾರತೀಯರು ಮಾರ್ಚ್ 23ರಿಂದ ಸ್ಯಾನ್  ಫ್ರಾನ್ಸಿಸ್ಕೋ ಮತ್ತು ಸಿಂಗಾಪುರದಲ್ಲಿ ನಿರಾಶ್ರಿತರಾಗಿದ್ದಾರೆ. ಇವರನ್ನು ಕರೆತರಲು ಏರ್ ಇಂಡಿಯಾದ ವಿಮಾನ 161 ದೆಹಲಿಯಿಂದ ಮೇ10ರ ರಾತ್ರಿ 2.45ಕ್ಕೆ ಲಂಡನ್ ಗೆ ತೆರಳಲಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 7.30ಕ್ಕೆ ಲಂಡನ್ ತಲುಪಲಿದ್ದು, ಮಾರನೆಯ ದಿನ ಬೆಳಗ್ಗೆ 9.45ಕ್ಕೆ ಲಂಡನ್  ನ ಹೀಥ್ರ್ಯೂ ವಿಮಾನ ನಿಲ್ದಾಣದಿಂದ ಭಾರತೀಯರನ್ನು ಹೊತ್ತು ರಾತ್ರಿ 10.50ಕ್ಕೆ ಬಂದಿಳಿಯಲಿದೆ. 90 ನಿಮಿಷಗಳ ಬಳಿಕ ಬೆಂಗಳೂರಿನತ್ತ ಪ್ರಯಾಣ ಆರಂಭಿಸುವ ವಿಮಾನ ರಾತ್ರಿ 3 ಗಂಟೆಗೆ ಬಂದಿಳಿಯಲಿದೆ. 

ಈ ಬಗ್ಗೆ ಮಾತನಾಡಿರುವ ಆರೋಗ್ಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು, ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ವಿದೇಶದಿಂದ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತದೆ. ಇದಕ್ಕಾಗಿ ಹೊಟೆಲ್, ಹಾಸ್ಟೆಲ್ ಮತ್ತು ಶಾಲಾ ಕಟ್ಟಡಗಳನ್ನು ಅಣಿಗೊಳಿಸಲಾಗಿದೆ ಎಂದು ಹೇಳಿದರು.  ಅಂತೆಯೇ ಸೋಂಕು ಪತ್ತೆ ವರದಿಯಲ್ಲಿ ನೆಗೆಟಿವ್ ಬಂದ ಬಳಿಕವಷ್ಟೇ ಅವರನ್ನು ಮನೆಗೆ ಕಳುಹಿಸಲಾಗುತ್ತದೆ ಎಂದೂ ಹೇಳಿದರು.

SCROLL FOR NEXT