ರಾಜ್ಯ

ಚರ್ಮ ಕುಶಲಕರ್ಮಿಗಳಿಗೆ 5000 ರೂ. ಪರಿಹಾರದ ವಿಶೇಷ ಪ್ಯಾಕೇಜ್‌: ರಾಜ್ಯ ಸರ್ಕಾರ ಘೋಷಣೆ

Raghavendra Adiga

ಬೆಂಗಳೂರು: ಕೋವಿಡ್‌ 19 ಲಾಕ್‌ಡೌನ್‌ ಪರಿಣಾಮವಾಗಿ ತೊಂದರೆಗೆ ಸಿಲುಕಿರುವ ರಸ್ತೆ ಬದಿಯಲ್ಲಿ ಚರ್ಮಗಾರಿಕೆ ವೃತ್ತಿ ಮಾಡುತ್ತಿರುವ ರಾಜ್ಯ 11,772 ಚರ್ಮ ಕುಶಲಕರ್ಮಿಗಳಿಗೆ ಒಂದು ಬಾರಿ ಪರಿಹಾರ ರೂ.5000 ಗಳಂತೆ 5.89 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನೀಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

11772 ಚರ್ಮ ವೃತ್ತಿಯಲ್ಲಿರುವ ಕುಶಲಕರ್ಮಿಗಳಿಗೆ ರೂ.5000 ಒಂದು ಬಾರಿ ಪರಿಹಾರವನ್ನು ನೀಡುವ ಸಂಬಂಧ ಪಾರದರ್ಶಕವಾಗಿ ಚರ್ಮ ಕುಶಲಕರ್ಮಿಗಳ ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಲು ವಿಶೇಷ ಪ್ಯಾಕೇಜನ್ನು ಅನುಷ್ಠಾನಗೊಳಿಸಬೇಕು.

ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಲಭ್ಯವಿರುವ ಪಾದಚಾರಿ ರಸ್ತೆ ಬದಿಯಲ್ಲಿ, ಬಸ್ ನಿಲ್ದಾಣದ ಮುಂಭಾಗ ಹಾಗೂ ಇತರ ಜನನಿಬಿಡ ಪ್ರದೇಶದಲ್ಲಿ ಕುಟೀರಗಳಲ್ಲಿ ಕುಳಿತು ಪಾದರಕ್ಷೆ ಮತ್ತು ಚರ್ಮ ವಸ್ತುಗಳ ರಿಪೇರಿ ಕಾಯಕ ನಿರ್ವಹಿಸುತ್ತಿರುವ ಮತ್ತು ತರಬೇತಿ ಪಡೆದ ಫಲಾನುಭವಿಗಳ ವೈಯಕ್ತಿಕ ಬ್ಯಾಂಕ್ ಖಾತೆಗೆ ಒಂದು ವಾರದೊಳಗೆ ಒಂದು ಬಾರಿ ಪರಿಹಾರದ ಮೊತ್ತವನ್ನು ಲಿಡ್‌ಕರ್ ಸಂಸ್ಥೆಯಿಂದ ನೇರವಾಗಿ ಪಾವತಿಸಬೇಕು.

ತರಬೇತಿ ಪಡೆದವರು ಮತ್ತು ರಸ್ತೆ ಬದಿ ಕುಟೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಶಲಕರ್ಮಿಗಳು ಒಂದು ಬಾರಿ ಪರಿಹಾರ ಮೊತ್ತವನ್ನು ಪಡೆಯಲು ಮಾತ್ರ ಅರ್ಹರಿರುತ್ತಾರೆ. ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಲಭ್ಯವಿರುವ ಅನುದಾನದಲ್ಲಿ ಈವೆಚ್ಚವನ್ನು ಭರಿಸಬೇಕು ಎಂದು ಆದೇಶದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಕೆ,ಸಿ.ಕುಮಾರ್ ತಿಳಿಸಿದ್ದಾರೆ.

ಕೊರೋನಾ ಲಾಕ್‌ಡೌನ್‌ನಿಂದಾಗಿ ರಸ್ತೆ ಬದಿಗಳಲ್ಲಿ ಬಸ್‌ ನಿಲ್ದಾಣಗಳ ಮುಂಭಾಗ, ಹೋಟೆಲ್‌ಗಳ ಮುಂಭಾಗಗಳಲ್ಲಿ ಪಾದರಕ್ಷೆ, ಮತ್ತು ಚರ್ಮ ವಸ್ತುಗಳ ದುರಸ್ತಿ ಮತ್ತು ವ್ಯಾಪಾರದಲ್ಲಿ ತೊಡಗಿರುವ ಚರ್ಮ ಕುಶಲಕರ್ಮಿಗಳು ಒಂದೂವರೆ ತಿಂಗಳಿಂದ ಕಸುಬುಗಳನ್ನು ನಡೆಸಲಾಗದೆ ದೈನಂದಿನ ಆದಾಯವನ್ನು ಕಳೆದುಕೊಂಡು ಉದ್ಯೋಗವಿಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿರುವ ಚರ್ಮ ಕುಶಲಕರ್ಮಿಗಳು ಪ್ರತಿ ದಿನದ ದುಡಿಮೆಯ ಮೇಲೆಯೇ ಅವರ ಕುಟುಂಬದ ನಿರ್ವಹಣೆ ಮಾಡುತ್ತಿರುತ್ತಾರೆ. ಕಳೆದ ಒಂದೂವರೆ ತಿಂಗಳಿಂದ ಕೆಲಸವಿಲ್ಲದೆ ಅವರ ಕುಟುಂಬದ ನಿರ್ವಹಣೆ ಮಾಡಲು ಸಾಧ್ಯವಾಗದೆ ಇರುವ ಬಗ್ಗೆ ಬಹಳಷ್ಟು ಕುಶಲಕರ್ಮಿಗಳು ಸರ್ಕಾರದಿಂದ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಆರ್ಥಿಕ ಸಹಾಯ ಕೋರಿದ್ದಾರೆ ಎಂಬ ವಿಷಯವನ್ನು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರದ ಗಮನಕ್ಕೆ ತಂದಿದ್ದರು.
 

SCROLL FOR NEXT