ರಾಜ್ಯ

ಪುಣೆಯಿಂದ ಮಹಿಳೆ ಮೃತದೇಹ ತರಲು ಮಂಡ್ಯ ಜಿಲ್ಲಾಡಳಿತ ತಡೆ; ರಾಜ್ಯದ ಗಡಿಯಲ್ಲೇ ಕುಟುಂಬಸ್ಥರ ಪರದಾಟ

Srinivas Rao BV

ಮಂಡ್ಯ: ಮಹಾರಾಷ್ಟ್ರದ ಪುಣೆಯಲ್ಲಿ ಮೃತಪಟ್ಟ ಮದ್ದೂರು ಮೂಲದ ಮಹಿಳೆಯೊಬ್ಬರ ಶವವನ್ನು ತರುವುದಕ್ಕೆ ಮಂಡ್ಯ ಜಿಲ್ಲಾಡಳಿತ ತಡೆಯೊಡ್ಡಿರುವ ಪರಿಣಾಮ ಮೃತದೇಹ ತರುತ್ತಿದ್ದ ಕುಟಂಬಸ್ಥರು ಪರದಾಡಿದ ಪ್ರಸಂಗ ರಾಜ್ಯದ ಗಡಿ ಪ್ರದೇಶ ಬೆಳಗಾವಿಯಲ್ಲಿಂದು ನಡೆದಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ಸಾಪ್ಟ್ವೇರ್ ಇಂಜಿನಿಯರ್ ಆಗಿದ್ದ ಮದ್ದೂರು ಮೂಲದ ಮಹಿಳೆ ಇಂದು ಮುಂಜಾನೆಯೇ ಮೃತಪಟ್ಟಿದ್ದರು. ಆಕೆಯ ಅಂತ್ಯ ಸಂಸ್ಕಾರವನ್ನು ಸ್ವಗ್ರಾಮ ಮದ್ದೂರು ಬಳಿ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದರು. ಅಂತೆಯೇ ಮಂಡ್ಯದತ್ತ ವಾಹನವೊಂದರಲ್ಲಿ ಮೃತದೇಹದೊಂದಿಗೆ ಹೊರಟಿದ್ದ ಕುಟುಂಬದ ಸದಸ್ಯರನ್ನು ರಾಜ್ಯದ ಗಡಿಯ ಚೆಕ್‌ಪೋಸ್ಟ್ನಲ್ಲಿ ಅಧಿಕಾರಿಗಳು ತಡೆದಿದ್ದಾರೆ.ಈ ವಿಷಯವನ್ನು ಮಂಡ್ಯ ಜಿಲ್ಲಾಡಳಿತದ ಅಧಿಕಾರಿಗಳ ಗಮನಕ್ಕೂ ತಂದಾಗ``ಕೊರೊನಾ’’ಪರೀಕ್ಷೆ ಇಲ್ಲದೆ ಯಾವುದೇ ಮೃತದೇಹವನ್ನು ಕಳುಹಿಸದಂತೆ ಸೂಚಿಸಿದ್ದಾರೆ.

ಚೆಕ್ ಪೋಸ್ಟ್ ಅಧಿಕಾರಿಗಳ ತಡೆಯಿಂದಾಗಿ ಕಂಗಾಲಾದ ಕುಟುಂಬ ಸದಸ್ಯರು ಸಂಜೆಯವರೆಗೂ ಮದ್ದೂರಿಗೆ ಬರಲು ಚೆಕ್‌ಪೋಸ್ಟ್ನಲ್ಲಿಯೇ ಮೃತದೇಹದೊಂದಿಗೆ ಪರದಾಟ ನಡೆಸಿದ್ದಾರೆ. ಅಂತಿಮವಾಗಿ ಮಂಡ್ಯ ಜಿಲ್ಲಾಡಳಿತ ಮತ್ತು ಬೆಳಗಾವಿ ಜಿಲ್ಲಾಡಳಿತವೂ ಸಹ ನಿರಾಕರಿಸಿದ್ದರಿಂದ ಮೃತದೇಹದೊಂದಿಗೆ ವಾಪಸ್ ಪುಣೆಗೆ ತೆರಳಿದ್ದಾರೆ ಎನ್ನಲಾಗಿದೆ. ಬೆಳಗಾವಿ ಜಿಲ್ಲಾಡಳಿತದ ಮೂಲಗಳ ಪ್ರಕಾರ ಕುಟುಂಬದ ಸದಸ್ಯರು ಮೃತಮಹಿಳೆಯ ಅಂತ್ಯಸಂಸ್ಕಾರವನ್ನು ಪುಣೆಯಲ್ಲಿಯೇ ನೆರವೇರಿಸಲು ಸಮ್ಮತಿಸಿದ್ದಾರೆ ಎಂದೂ ತಿಳಿದು ಬಂದಿದೆ.

ಇನ್ನೂ ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿದ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್,ಈಗಾಗಲೆ ಕೆ.ಆರ್.ಪೇಟೆಯ ಬಿ.ಕೊಡಗಹಳ್ಳಿಗೆ ಬಾಂಬೆಯಿಂದ ಬಂದ ಮೃತದೇಹದಿಂದ ಆದ ಪ್ರಮಾದಗಳಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ,ಕೊವಿಡ್-19 ಪರೀಕ್ಷೆಯಾಗದೆ ತರುವ ಯಾವುದೇ ಮೃತದೇಹಗಳನ್ನು ಬಿಡದಿರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

-ನಾಗಯ್ಯ

SCROLL FOR NEXT