ರಾಜ್ಯ

ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ: ಡಾ. ಸಿ.ಎನ್. ಅಶ್ವತ್ಥ ನಾರಾಯಣ

Nagaraja AB

ರಾಮನಗರ: ನಗರದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ಹಾಗೂ ಮಾವು ಸಂಸ್ಕರಣಾ ಘಟಕವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ  ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ. 

ರಾಮನಗರದಲ್ಲಿ ರೇಷ್ಮೆ ಸಚಿವ ನಾರಾಯಣಗೌಡ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

"ರಾಮನಗರದಲ್ಲಿ ಹೊಸ ರೇಷ್ಮೆ ಗೂಡು ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಏಷ್ಯಾದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ವಿಸ್ತರಣೆ ಮಾಡಿ ಹೈಟೆಕ್ ಮಾರುಕಟ್ಟೆಯಾಗಿ ರೂಪಿಸಲಾಗುವುದು. ಎರಡು ಎಕರೆಯಲ್ಲಿರುವ ಮಾರುಕಟ್ಟೆ ವಿಸ್ತರಣೆ ಆಗಿ, ಪಾರದರ್ಶಕ ಆಡಳಿತ ನಡೆಸುವಂತಾಗಬೇಕು. ಅದಕ್ಕಾಗಿ ಈ ಮಾರುಕಟ್ಟೆಗೆ ಹೊಂದಿಕೊಂಡಂತೆ ಇರುವ ಕೆಐಎಡಿಬಿಗೆ ಸೇರಿದ ಮೂರು ಎಕರೆ ಭೂಮಿಯನ್ನು ಪಡೆದುಕೊಳ್ಳಲಾಗುವುದು.  ಜಾಗದ ಸಂಬಂಧ ಕೋರ್ಟ್ ನಲ್ಲಿ ವಿವಾದ ಇದ್ದು ಅದನ್ನು ಬೇಗ ಬಗೆಹರಿಸಿ, ಭೂಮಿಯನ್ನು ವಶಕ್ಕೆ ಪಡೆಯಬೇಕು. ಈ ಸಂಬಂಧ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು ,"ಎಂದರು.

"ರೇಷ್ಮೆಗೂಡಿನ ದರ ಕುಸಿದು ಬೆಳೆಗಾರರು ಕಂಗಾಲಾಗಿದ್ದ ಸಂದರ್ಭದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ದರ ಕುಸಿತವನ್ನು ತಡೆಯುವ ಪ್ರಯತ್ನ ಮಾಡಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಸಚಿವ ನಾರಾಯಣಗೌಡರು ಅಗತ್ಯ ಕ್ರಮ ವಹಿಸಿ, ರೈತರಿಗೆ ನೆರವಾಗಿದ್ದಾರೆ. ಆದ್ದರಿಂದ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ,"ಎಂದು ತಿಳಿಸಿದರು. 

ಮಾವು ಸಂಸ್ಕರಣಾ ಘಟಕ
"ಕೋಲಾರದ ನಂತರ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆ ರಾಮನಗರ. ಇಲ್ಲಿ ಸುಮಾರು  97 ಸಾವಿರ ಟನ್‌ ಮಾವು ಉತ್ಪಾದನೆ ಆಗುತ್ತಿದ್ದು,  ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಆರಂಭಿಸಬೇಕು ಎಂಬ ಬಹುಕಾಲದ ಬೇಡಿಕೆ ಈಗ ಈಡೇರುತ್ತಿದೆ.  ರೇಷ್ಮೆ ಇಲಾಖೆಯ 16 ಎಕರೆ ಜಾಗ ಪಡೆದು, ಮಾವು ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗುವುದು,"ಎಂದು ಹೇಳಿದರು. 

ಈ ಸಂದರ್ಭದಲ್ಲಿ ತೋಟಗಾರಿಕಾ ಸಚಿವ ಕೆ.ಸಿ.ನಾರಾಯಣಗೌಡ, ಮಾಗಡಿ ಶಾಸಕ ಎ.ಮಂಜುನಾಥ್,  ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್, ರಾಮನಗರ ಜಿಲ್ಲಾಧಿಕಾರಿ ಡಾ. ಎಂ.ಎಸ್. ಅರ್ಚನಾ, ರಾಮನಗರ ಜಿ.ಪಂ. ಸಿಇಒ ಇಕ್ರಂ ಹಾಗೂ  ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ ಉಪಸ್ಥಿತರಿದ್ದರು.

SCROLL FOR NEXT