ರಾಜ್ಯ

ದರೋಡೆಗೆ ಯತ್ನ: ಬೆಂಗಳೂರಿನಲ್ಲಿ ಐವರ ಬಂಧನ

Lingaraj Badiger

ಬೆಂಗಳೂರು: ದರೋಡೆಗೆ ಸಂಚು ರೂಪಿಸುತ್ತಿದ್ದ ಮೂವರು ರೌಡಿಶೀಟರ್‌ ಸೇರಿ ಐವರನ್ನು ಕೇಂದ್ರ ಅಪರಾಧ ದಳ(ಸಿಸಿಬಿ) ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಾಗಲಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ರೌಡಿಶೀಟರ್‌, ಅಶೋಕನಗರ ನಿವಾಸಿ ಆರ್‌. ರಘು ಅಲಿಯಾಸ್‌ ಕೋತಿ ರಘು (27), ಬಸವೇಶ್ವರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ರೌಡಿಶೀಟರ್, ವಿಲ್ಸನ್‌ ಗಾರ್ಡನ್ ನಿವಾಸಿ ಎಂ. ಗಣೇಶ್‌ ಅಲಿಯಾಸ್ ಗಣಿ (27), ಪೀಣ್ಯ ಪೊಲೀಸ್‌ ಠಾಣೆ ರೌಡಿ ಶೀಟರ್‌ ಟಿ. ದಾಸರಹಳ್ಳಿ ಬಳಿಯ ಚೊಕ್ಕಸಂದ್ರ ನಿವಾಸಿ ಎನ್‌. ರಂಜನ್‌ ಅಲಿಯಾಸ್‌ ಸೀಲು (29), ಲಗ್ಗೆರೆಯ ಸುನೀಲ್‌ ಕುಮಾರ್‌ (31) ಮತ್ತು ಜಾಲಹಳ್ಳಿ ಕ್ರಾಸ್‌ ಬಳಿಯ ವಿವೇಕಾನಂದ ನಗರದ ರಾಜಶೇಖರ್‌ (27) ಬಂಧಿತ ಆರೋಪಿಗಳು.

ಬುಧವಾರ ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯ ಕೈಗಾರಿಕಾ ಪ್ರದೇಶದ ಕಿರ್ಲೋಸ್ಕರ್‌ ರಸ್ತೆಯ ಬಳಿ ದರೋಡೆಗೆ ಸಂಚು ರೂಪಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ‌ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಒಂದು ಮಚ್ಚು, ಒಂದು ಲಾಂಗ್‌, ಎರಡು ಖಾರದ ಪುಡಿ ಪೊಟ್ಟಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತರ ಪೈಕಿ ರಘು ವಿರುದ್ಧ ಬಾಗಲಗುಂಟೆ, ಪೀಣ್ಯ ಮತ್ತು ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎರಡು ಕೊಲೆ, ಎರಡು ಕೊಲೆಯತ್ನ ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಗಣೇಶ್‌ ವಿರುದ್ಧ ಬಸವೇಶ್ವರ ನಗರ, ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎರಡು ಕೊಲೆ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಒಂದು ಕೊಲೆ ಯತ್ನ, ಬಸವೇಶ್ವರ ನಗರ ಠಾಣೆಯಲ್ಲಿ ಒಂದು ದರೋಡೆ ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದೆ.

ರಂಜನ್‌ ವಿರುದ್ಧ ಪೀಣ್ಯ ಮತ್ತು ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ತಲಾ ಒದೊಂದು ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಸುನೀಲ್‌ ವಿರುದ್ಧ ಮೂರು ವರ್ಷಗಳ ಹಿಂದೆ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಸಿಸಿಬಿಯ ಸಂಘಟಿತ ಅಪರಾಧ ದಳ ‍ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

SCROLL FOR NEXT