ರಾಜ್ಯ

ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರೀ ಮಳೆ: ಓರ್ವ ಸಾವು, ಅಕ್ಕಿ ಗೋದಾಮು, ತರಕಾರಿ ಮಾರುಕಟ್ಟೆಗೆ ಹಾನಿ

Lingaraj Badiger

ಮಂಗಳೂರು: ನಗರದಲ್ಲಿ ಸೋಮವಾರ ಮುಂಜಾನೆ ಗುಡುಗು ಸಿಡಿಲು, ಗಾಳಿ ಸಹಿತ ಭಾರಿ ಮಳೆ ಸುರಿಯಿತು. ಬೆಳಗ್ಗೆ 5.00 ಗಂಟೆ ಸುಮಾರಿಗೆ ಆರಂಭಗೊಂಡು 9.30ರ ತನಕವೂ ಜೋರಾಗಿ ಮಳೆಯಾಯಿತು. ಅಲ್ಲಲ್ಲಿ ಹಾನಿ ಸಂಭವಿಸಿದರೆ, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಜನ ಜೀವನ ತೀವ್ರ ಬಾಧಿತವಾಯಿತು. ಬೆಳಗ್ಗೆ ಮೋಡಗಳು ದಟ್ಟೈಸಿದ್ದ ಕಾರಣ ಬೆಳಕು ಮಬ್ಬಾಗಿತ್ತು. ವಾಹನಗಳು ಹೆಡ್‌ಲೈಟ್ ಹಾಕಿಕೊಂಡೇ ಸಂಚರಿಸಿದವು. ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಯುವಕನೊಬ್ಬ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ. ಮೃತನನ್ನು ಭರತ್ ಎಂದು ಗುರುತಿಸಲಾಗಿದೆ. 

ತಕ್ಷಣ ಯುವಕನನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ ಆತ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಯುವಕ ಭಾನುವಾರ ರಾತ್ರಿ ಸುರಿದ ಗುಡುಗು ಸಿಡಲಿನ ಮಳೆಯ ಸಂದರ್ಭದಲ್ಲಿ ಸಿಡಿಲಿನಾಘಾತಕ್ಕೆ ಒಳಗಾಗಿದ್ದ ಎನ್ನಲಾಗಿದೆ.

ಮಂಗಳೂರು ನಗರದ ಕೆ.ಪಿ.ಟಿ. ಕ್ಯಾಂಪಸ್ ನಲ್ಲಿದ್ದ ಸರಕಾರಿ ಅಕ್ಕಿ ಗೋದಾಮಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಪಡಿತರ ಅಂಗಡಿಗಳು ,ಅಂಗನವಾಡಿ ಸಹಿತ ಜಿಲ್ಲೆಯ ವಿವಿಧೆಡೆ ಹಂಚಿಕೆ ಮಾಡಲು ದಾಸ್ತಾನು ಮಾಡಲಾಗಿದ್ದ ಲಕ್ಷಾಂತರ ರೂ.ಮೌಲ್ಯದ ಅಕ್ಕಿ ದಿಢೀರ್ ಸುರಿದ ಮಳೆಗೆ ನೀರು ಪಾಲಾಗಿದೆ.

ಅಕ್ಕಿ ಗೋಣಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಎತ್ತರಿಸಿಡದೆ ನೇರವಾಗಿ ನೆಲದ ಮೇಲೆ ಇಡಲಾಗಿದೆ. ಹೀಗಾಗಿ ಅಕ್ಕಿ ಗೋಣಿ ಚೀಲಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಇದೀಗ ಕೋವಿಡ್ 19 ವೈರಸ್ ಹಾವಳಿಯಿಂದ ಪೂರ್ವಭಾವಿಯಾಗಿ ಹಂಚಿಕೆಗೆ ಅಕ್ಕಿ ಬಂದಿದೆ. ಕೆಳಭಾಗದಲ್ಲಿರುವ ಗೋಣಿ ಚೀಲದಲ್ಲಿ ಅಕ್ಕಿ ಒದ್ದೆಯಾಗಿದ್ದು ಇದನ್ನು ಬಳಕೆ ಮಾಡಲು ಸಾಧ್ಯವಿಲ್ಲದಂಗಾಗಿದೆ. ಇನ್ನೊಂದು ಗೋದಾಮು ಸುರಕ್ಷಿತವಾಗಿದ್ದು ನೀರು ನುಗ್ಗಿಲ್ಲ. 

ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ಇತ್ತೀಚೆಗೆ ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಇಲ್ಲಿ ವ್ಯಾಪಾರಿಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇತ್ತು, ಈ ನಡುವೆ ಸೋಮವಾರ ಸುರಿದ ಭಾರಿ ಮಳೆಗೆ ಅಲ್ಲಿನ ಅವ್ಯವಸ್ಥೆ ಹೊರಬಿದ್ದಿದೆ.

ಮಳೆ ನೀರು ಮಾರುಕಟ್ಟೆಗೆ ನುಗ್ಗಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ತರಕಾರಿ , ಹಣ್ಣು ಹಂಪಲು ಹಾನಿಗೀಡಾಯಿತು. ನಗರದ ಸೆಂಟ್ರಲ್ ಮಾರುಕಟ್ಟೆಯ ತರಕಾರಿ ಹಾಗೂ ಹಣ್ಣುಹಂಪಲು ಸಗಟು ವ್ಯಾಪಾರವನ್ನು ನಗರದ ಹೊರ ವಲಯದ ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲು ಸಗಟು ವ್ಯಾಪಾರಸ್ಥರು ನಿರಾಕರಿಸಿದ್ದರೂ ಕೂಡ ಒತ್ತಾಯ ಪೂರ್ವಕವಾಗಿ ಇತ್ತೀಚೆಗೆ ಸ್ಥಳಾಂತರಗೊಳಿಸಲಾಗಿತ್ತು.

ಕೋವಿಡ್ 19 ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಈಗಿರುವ ಮಾರುಕಟ್ಟೆಯ ವಿನ್ಯಾಸ ಮತ್ತು ರಚನೆ ಸೂಕ್ತವಾಗಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆ ತರಾತುರಿಯಲ್ಲಿ ಬೈಕಂಪಾಡಿ ಮಾರುಕಟ್ಟೆಗೆ ಸ್ಥಳಾಂತರ ಮಾಡಿಸಿದ್ದರು. 
ವ್ಯಾಪಾರಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಬೈಕಂಪಾಡಿ ಮಾರುಕಟ್ಟೆಯಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ಭರವಸೆ ನೀಡಿತ್ತು. ಆದರೆ ಯಾವುದೇ ಮೂಲಭೂತ ಸೌಕರ್ಯ ಒದಗಿಸದೆ ವ್ಯಾಪಾರ ವಹಿವಾಟು ಆರಂಭಿಸಲಾಗಿತ್ತು. ಈಗ ಮಳೆಯಿಂದಾಗಿ ವ್ಯಾಪಾರಿಗಳಿಗೆ ಭಾರೀ ನಷ್ಟವಾಗಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಬೀಸುತ್ತಿರುವ ಗಾಳಿಯಿಂದಾಗಿ ಸಮುದ್ರದ ತೆರೆಗಳು ಬಿರುಸುಗೊಂಡಿದೆ. ಸಾರ್ವಜನಿಕರು ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮಳೆಯಿಂದ ಹಾನಿಗೀಡಾದ ಹಾಗೂ ಜಲಾವೃತ ಪ್ರದೇಶಗಳಿಗೆ ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ.ಖಾದರ್, ಭರತ್ ಶೆಟ್ಟಿ , ಮಾಜಿ ಶಾಸಕ ಜೆ.ಆರ್.ಲೊಬೋ ಭೇಟಿ ನೀಡಿ ಪರಿಶೀಲಿಸಿದರು.

-ತಾರಾನಾಥ್

SCROLL FOR NEXT