ರಾಜ್ಯ

ಜೂನ್ 1ರಿಂದ ರೈಲು ಸಂಚಾರ ಆರಂಭ: ಪ್ರಯಾಣಿಕರು ಏನು ಮಾಡಬೇಕು?

Sumana Upadhyaya

ಬೆಂಗಳೂರು: ಕಳೆದ ಬುಧವಾರ ರಾತ್ರಿ ಘೋಷಣೆಯಾದ ಎಲ್ಲಾ ವಿಶೇಷ ಪ್ರಯಾಣಿಕ ರೈಲುಗಳಲ್ಲಿ ಟಿಕೆಟ್ ಬುಕ್ಕಿಂಗ್ ಗೆ ಬೇಡಿಕೆ ಕಂಡುಬಂದಿದೆ. ನಿನ್ನೆ ಬೆಳಗ್ಗೆ 10 ಗಂಟೆಗೆ  ಆನ್ ಲೈನ್ ನಲ್ಲಿ ಆರಂಭವಾದ ಟಿಕೆಟ್ ಬುಕ್ಕಿಂಗ್ ನಲ್ಲಿ ಆರಂಭವಾದ ಕೆಲವೇ ಹೊತ್ತಿನಲ್ಲಿ ಸಾಕಷ್ಟು ಟಿಕೆಟ್ ಬುಕ್ಕಿಂಗ್ ಆದವು.

ಜೂನ್ 1ರಿಂದ ಕರ್ನಾಟಕ ಮತ್ತು ದೇಶಾದ್ಯಂತ ಸಂಚರಿಸಲಿರುವ ವಿಶೇಷ ರೈಲಿನಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ವಿಶೇಷ ನಿಯಮ ಹೊರಡಿಸಿದೆ.

ಏನದು ನಿಯಮ: ಟಿಕೆಟ್ ಬುಕ್ಕಿಂಗ್ ದೃಢಪಟ್ಟವರಿಗೆ ಮಾತ್ರ ರೈಲು ಹತ್ತಲು ಅವಕಾಶ.

- ರೈಲು ಹೊರಡುವುದಕ್ಕೆ 90 ನಿಮಿಷಗಳ ಮೊದಲು ಪ್ರಯಾಣಿಕರು ನಿಲ್ದಾಣದಲ್ಲಿರಬೇಕು. ಅಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಗೆ ಒಳಗಾಗಬೇಕು. ಕೊರೋನಾ ಲಕ್ಷಣರಹಿತ ಪ್ರಯಾಣಿಕರನ್ನು ಮಾತ್ರ ರೈಲು ಹತ್ತಲು ಬಿಡುತ್ತಾರೆ.

- ಪ್ರಯಾಣಿಕರ ಆರೋಗ್ಯ ತಪಾಸಣೆ ವೇಳೆ ಕೊರೋನಾ ಲಕ್ಷಣ ಕಂಡುಬಂದರೆ, ದೇಹದ ತಾಪಮಾನ ಹೆಚ್ಚಾಗಿದ್ದರೆ ಟಿಕೆಟ್ ದೃಢಪಟ್ಟಿದ್ದರೂ ಸಹ ಪ್ರಯಾಣ ಮಾಡಲು ಬಿಡುವುದಿಲ್ಲ. ಅಂತಹ ಸಂದರ್ಭದಲ್ಲಿ ಪ್ರಯಾಣಿಕರ ಟಿಕೆಟ್ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ.

- ರೈಲಿನಲ್ಲಿ ಇರುವಾಗ, ಹತ್ತುವಾಗ, ಇಳಿಯುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ರೈಲಿನಲ್ಲಿ ಬೆಡ್ ಶೀಟ್, ಹೊದಿಕೆ ಇತ್ಯಾದಿಗಳಿರುವುದಿಲ್ಲ. ಆಹಾರಗಳು ಸಿಗುವುದಿಲ್ಲ, ಆದರೆ ಕೆಲವು ಆಹಾರಗಳನ್ನು ರೈಲು ನಿಲ್ದಾಣಗಳಲ್ಲಿ ಮತ್ತು ರೈಲಿನಲ್ಲಿ ಮಾರಾಟ ಮಾಡಬಹುದು.
- ಮಹಾರಾಷ್ಟ್ರದಿಂದ ರೈಲು ಬಂದು ಹೋಗಲು ಅವಕಾಶವಿದ್ದರೂ ಕೂಡ ರಾಜ್ಯ ಸರ್ಕಾರ ನೆರೆ ರಾಜ್ಯಗಳಿಂದ ರೈಲುಗಳ ಆಗಮನಕ್ಕೆ ಅವಕಾಶ ನೀಡದಿರುವುದರಿಂದ ನೈರುತ್ಯ ರೈಲ್ವೆ ವಲಯ ಈ ಬಗ್ಗೆ ಚರ್ಚೆ ನಡೆಸುತ್ತಿದೆ.

SCROLL FOR NEXT