ರಾಜ್ಯ

ರಾಜ್ಯದಲ್ಲಿ ವಿಮಾನ ಹಾರಾಟ ಆರಂಭ, ಪ್ರಯಾಣಿಕರಿಗೆ 14 ದಿನ ಕ್ವಾರಂಟೈನ್ ಕಡ್ಡಾಯ

Lingaraj Badiger

ಬೆಂಗಳೂರು: ಕೊವಿಡ್-19 ಲಾಕ್ ಡೌನ್ ಪರಿಣಾಮ ಸುಮಾರು ಎರಡು ತಿಂಗಳ ನಂತರ ದೇಶಿ ವಿಮಾನಯಾನ ಸಂಚಾರ ಸೋಮವಾರ ಆರಂಭವಾಗಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 107 ವಿಮಾನಗಳು ಹಾರಿದರೆ, ನೂರಾರು ವಿಮಾನಗಳು ಲ್ಯಾಂಡ್ ಆದವು.

ಮೂಲಗಳ ಪ್ರಕಾರ,176 ಪ್ರಯಾಣಿಕರಿಂದ ಏರ್ ಏಷ್ಯಾದ ಮೊದಲ ವಿಮಾನ  ಇಂದು ಬೆಳಗ್ಗೆ 5.30ಕ್ಕೆ ತೆರಳಿತು. ನಂತರ 7.35ಕ್ಕೆ 113 ಪ್ರಯಾಣಿಕರಿಂದ ವಿಮಾನ ಚೆನ್ನೈಯಿಂದ ಬೆಂಗಳೂರಿಗೆ ಆಗಮಿಸಿತು.

ಮಹಾರಾಷ್ಟ್ರ, ಗುಜರಾತ್, ದೆಹಲಿ, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ತಮಿಳುನಾಡಿನಿಂದ ಬರುವ ಪ್ರಯಾಣಿಕರನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಅವರ ವರದಿ ನೆಗಟಿವ್ ಬಂದ ನಂತರ ಕಡ್ಡಾಯವಾಗಿ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ ಏಳು ದಿನ ಹೋಮ್ ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.

ಇತರೆ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ 14 ದಿನ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗುತ್ತಿದೆ.

ಗರ್ಭಿಣಿ ಮಹಿಳೆಯರಿಗೆ ಮತ್ತು 10 ವರ್ಷದೊಳಗಿನ ಮಕ್ಕಳಿಗೆ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

ಇನ್ನು ತುರ್ತು ಕೆಲಸದ ಮೇಲೆ ಬರುವ ಉದ್ಯಮಿಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಅವರಿಗೆ ಕ್ವಾರಂಟೈನ್ ನಿಂದ ವಿನಾಯ್ತಿ ನೀಡಲಾಗುವುದು. ಆದರೆ ಅವರು ಕೊವಿಡ್-19 ನೆಗಟಿವ್ ಬಂದಿರುವ ವರದಿ ನೀಡಬೇಕು ಮತ್ತು ಅದು ಎರಡು ದಿನಕ್ಕಿಂತ ಹೆಚ್ಚು ಹಳೆಯದಾಗಿರಬಾರದು ಎಂದು ಸರ್ಕಾರ ಹೇಳಿದೆ.

SCROLL FOR NEXT