ರಾಜ್ಯ

ಅಧಿಕಾರಿಗಳ ಎಡವಟ್ಟು: ಬೇರೆಯವರಿಗೆ ಸ್ಥಳಾವಕಾಶ ಕಲ್ಪಿಸಲು ಕೋವಿಡ್ ಟೆಸ್ಟ್ ಇಲ್ಲದೆಯೆ ಕ್ವಾರಂಟೈನ್ ಅವಧಿ ಕಡಿತ!

Lingaraj Badiger

ಬೆಂಗಳೂರು: ಇತರೆ ರಾಜ್ಯ ಹಾಗೂ ವಿದೇಶಗಳಿಂದ ಜನ ಭಾರಿ ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸುವ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ದೊಡ್ಡ ಎಡವಟ್ಟು ಮಾಡುತ್ತಿದ್ದು, ಕೊರೋನಾ ವೈರಸ್ ಮತ್ತಷ್ಟು ಹರಡುವ ಭೀತಿ ಎದುರಾಗಿದೆ.

ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ರಾಜ್ಯಕ್ಕೆ ಹೊಸದಾಗಿ ಆಗಮಿಸುತ್ತಿರುವ ಜನರನ್ನು ಕ್ವಾರಂಟೈನ್ ಮಾಡುವುದಕ್ಕಾಗಿ ಈಗ ಕ್ವಾರಂಟೈನ್ ನಲ್ಲಿರುವವರ 14 ದಿನಗಳ ಅವಧಿಯನ್ನು ಕಡಿತಗೊಳಿಸಿ, ಅವರಿಗೆ ಯಾವುದೇ ಕೋವಿಡ್-19 ಪರೀಕ್ಷೆ ನಡೆಸದೇ ಮನೆಗೆ ಕಳುಹಿಸಿಕೊಡುತ್ತಿರುವ ಆಘಾತಕಾರಿ ಬೆಳವಣಿಗೆಗಳು ನಡೆಯುತ್ತಿವೆ.

ಇತರೆ ದೇಶ ಮತ್ತು ರಾಜ್ಯಗಳಿಂದ ಬರುವವರಿಗೆ ಅವಕಾಶ ಕಲ್ಪಿಸುವುದಕ್ಕಾಗಿ 14 ದಿನಗಳ ಅಥವಾ ಕನಿಷ್ಠ ಏಳು ದಿನ ಕ್ವಾರಂಟೈನ್ ಅವಧಿ ಮುಗಿಸಿದವರಿಗೆ ಮನೆಗೆ ಹೋಗುವಂತೆ ಸೂಚಿಸಲಾಗುತ್ತಿದೆ. ರೈಲು ಮತ್ತು ಬಸ್ ಪ್ರಯಾಣಿಕರ ಸಂಖ್ಯೆ ವಿಮಾನಗಳಲ್ಲಿ ಬರುವವರಿಗಿಂತ ಹೆಚ್ಚಿರುವುದರಿಂದ. ಹೆಚ್ಚಾಗಿ ಹಾಸ್ಟೆಲ್‌ಗಳು ಮತ್ತು ಬಜೆಟ್ ಹೋಟೆಲ್‌ಗಳಲ್ಲಿ ಉಳಿದುಕೊಂಡಿರುವವರಿಗೆ ಹೋಗಲು ಹೇಳಲಾಗುತ್ತದೆ ”ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನಾವು ಮೇ 17 ರಿಂದ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೇವೆ. ಇಲ್ಲಿಯವರೆಗೆ, ನಮ್ಮ ಮಾದರಿಗಳನ್ನು ತೆಗೆದುಕೊಳ್ಳಲಾಗಿಲ್ಲ. ನಮ್ಮಲ್ಲಿ ಇಪ್ಪತ್ತೊಂದು ಜನರು ದೆಹಲಿಯಿಂದ ಬಂದಿದ್ದರು, ಮತ್ತು ಈಗ ರಾಜಸ್ಥಾನದಿಂದ ಹೆಚ್ಚಿನ ಜನರನ್ನು ಇಲ್ಲಿಗೆ ಕರೆತರಲಾಗುವುದು ಎಂದು ತಿಳಿಸಲಾಗಿದೆ. ನಮ್ಮಲ್ಲಿ ಕೆಲವರಿಗೆ ಬೇಗನೆ ಹೊರಡುವಂತೆ ಕೇಳಲಾಗಿದ್ದು, ಉಳಿದವರಿಗೆ ಎರಡು ದಿನ ಕಾಲಾವಕಾಶ ನೀಡಲಾಗಿದೆ ಎಂದು ಕ್ವಾರಂಟೈನ್ ನಲ್ಲಿರುವ ರಾಘವೇಂದ್ರ ವಿ ಎಂಬುವವರು ಹೇಳಿದ್ದಾರೆ.

ಇನ್ನು ಕಳೆದ ಏಳು ದಿನಗಳಿಂದ ಹನುಮಂತ ನಗರದ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್ ನಲ್ಲಿರುವ ಮೊಹ್ಸಿನ್ ಎ, ಅವರು, “ತನಗೆ ಯಾವುದೇ ಪರೀಕ್ಷೆಗಳು ನಡೆದಿಲ್ಲ ಮತ್ತು ಯಾರೂ ನನ್ನ ವಿವರಗಳನ್ನು ತೆಗೆದುಕೊಂಡಿಲ್ಲ. ನಾನು ತಂಗಿದ್ದ ಹೋಟೆಲ್‌ನ ಸಿಬ್ಬಂದಿಗಳು ನನಗೆ ಹೇಳಿದ್ದು, ನಾನು ಯಾವುದೇ ರೋಗಲಕ್ಷಣಗಳು ಕಾಣಿಸಿಕೊಳ್ಳದ ಕಾರಣ ನಾನು ಮನೆಗೆ ಹೋಗಬೇಕೆಂದು ಸರ್ಕಾರ ಸೂಚಿಸಿದೆ. ವಿಚಿತ್ರವೆಂದರೆ, ಈ ಮಾಹಿತಿಯನ್ನು ಹೋಟೆಲ್ ಸಿಬ್ಬಂದಿಗಳು ನನಗೆ ತಲುಪಿಸಿದ್ದಾರೆ ಹೊರತು ಆರೋಗ್ಯ ಅಧಿಕಾರಿಗಳಲ್ಲ ” ಎಂದು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಬಿಎಚ್ ಅನಿಲ್ ಕುಮಾರ್ ಅವರು, ಸ್ಥಳವಕಾಶದ ಕೊರತೆ ಹಿನ್ನೆಲೆಯಲ್ಲಿ ಕ್ವಾರಂಟೈನ್ ಅವಧಿಯನ್ನು ಪರಿಷ್ಕರಿಸಲಾಗಿದೆ. ಈ ಕುರಿತು ಚರ್ಚಿಸಲು ಸರ್ಕಾರದೊಂದಿಗೆ ಸಭೆ ಯೋಜಿಸಲಾಗಿದೆ. ಹಾಸ್ಟೆಲ್ ಸೌಲಭ್ಯಗಳನ್ನು ಸುಧಾರಿಸುವುದು ಕಷ್ಟವಾದ್ದರಿಂದ, ಹೊರಗಡೆಯಿಂದ ಬರುವ ಎಲ್ಲರಿಗೂ ಹೇಗೆ ವಸತಿ ಕಲ್ಪಿಸಬೇಕು ಎಂದು ಸರ್ಕಾರ ಯೋಚಿಸುತ್ತಿದೆ ಎಂದಿದ್ದಾರೆ.

SCROLL FOR NEXT