ಬೀದರ್: ಮಾರಕ ಕೊರೋನಾ ವೈರಸ್ ಗೆ ರಾಜ್ಯದಲ್ಲಿ ಮತ್ತೊಂದು ಸಾವು ಸಂಭವಿಸಿದ್ದು, ಬೀದರ್ ನಲ್ಲಿ 49 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮೂಲಗಳ ಪ್ರಕಾರ ಬೀದರ್‌ನ ವಿದ್ಯಾನಗರ ಕಾಲೋನಿಯ ನಿವಾಸಿ 49 ವರ್ಷದ ವ್ಯಕ್ತಿಗೆ ಮೇ 22ರಂದು ಕೊರೊನಾ ಸೋಂಕು ಪತ್ತೆಯಾಗಿತ್ತು. ಅವರನ್ನು P-1712 ಎಂದು ಗುರುತಿಸಲಾಗಿತ್ತು. ಸೋಂಕಿನಿಂದಾಗಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬ್ರೀಮ್ಸ್‌ನ ಐಸೋಲೇಷನ್ ವಾರ್ಡಿನಲ್ಲಿ ಇಂದು ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯು ಕಿಡ್ನಿ ವೈಫಲ್ಯ ಹಾಗೂ ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆರೋಗ್ಯ ಇಲಾಖೆ ನಿಯಮದಂತೆ ಇಂದು ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ.
ಈ ಮೂಲಕ ಬೀದರ್ ಜಿಲ್ಲೆಯಲ್ಲಿ ಕೊರೋನಾಗೆ ಮೂರನೇ ಬಲಿಯಾಗಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 45ಕ್ಕೆ ಏರಿಯಾದಂತಾಗಿದೆ. ಅಂತೆಯೇ ಆರೋಗ್ಯ ಇಲಾಖೆಯ ಮಂಗಳವಾರದ ವರದಿ ಅನ್ವಯ ಬೀದರ್ ನಲ್ಲಿ ಸೋಂಕಿತರ ಸಂಖ್ಯೆ 95ಕ್ಕೆ ಏರಿಕೆಯಾಗಿದೆ.