ರಾಜ್ಯ

ಸೇವಾ ಸಿಂಧು ಆ್ಯಪ್ ಮೂಲಕ ಪರಿಹಾರ ಪಡೆಯಲು ಕ್ಯಾಬ್, ಆಟೋ ಚಾಲಕರ ಪರದಾಟ

Lingaraj Badiger

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿರುವ ಆಟೋ, ಟ್ಯಾಕ್ಸಿ ಚಾಲಕರು ಮುಖ್ಯಮಂತ್ರಿಗಳು ಘೋಷಿಸಿರುವ ಪರಿಹಾರದ ಹಣ ಪಡೆಯಲು ಪರದಾಡುತ್ತಿದ್ದು, ಒಂದು ವಾರ ಕಳೆದರೂ ಯಾರಿಗೂ ಪರಿಹಾರದ ಹಣ ಸಿಕ್ಕಿಲ್ಲ.

ಆಟೋ ಹಾಗೂ ಕ್ಯಾಬ್ ಚಾಲಕರು ಪರಿಹಾರ ಪಡೆಯಲು ಸರ್ಕಾರದ ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ ವಾಸ್ತವವಾಗಿ, ಸೇವಾ ಸಿಂಧು ಆ್ಯಪ್ ನಲ್ಲಿನ ಅರ್ಜಿಗಳ ಪರಿಶೀಲನೆಗೆ ಅನುಕೂಲವಾಗುವಂತಹ ಸಾಫ್ಟ್‌ವೇರ್ ಅನ್ನು ಸರ್ಕಾರ ಇನ್ನೂ ಸ್ಥಾಪಿಸಿಲ್ಲ ಮತ್ತು ಡಿವಿಟಿ ಮೂಲಕ ನೆರವು ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು ಸೇವಾ ಸಿಂಧು ಪೋರ್ಟಲ್ ಮತ್ತು ಸಾರಿಗೆ ಮತ್ತು ಹಣಕಾಸು ಇಲಾಖೆಗಳ ನಡುವೆ ದತ್ತಾಂಶವನ್ನು ಸಂಯೋಜಿಸಿಲ್ಲ. ಹೀಗಾಗಿ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಟೋ ಮತ್ತು ಕ್ಯಾಬ್ ಚಾಲಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೆಣಗಾಡುತ್ತಿರುವುದರಿಂದ, ಇದುವರೆಗೆ ಕೇವಲ 1.30 ಲಕ್ಷ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗಿದೆ. ಆದರೆ ರಾಜ್ಯದಲ್ಲಿ ಸುಮಾರು 7.75 ಲಕ್ಷ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಈ ಪರಿಹಾರದ ಹಣ ಪಡೆಯಲಿದ್ದಾರೆ ಎಂದು ಸ್ವತಃ ಸಿಎಂ ಅಂದಾಜು ಮಾಡಿದ್ದರು. ಕ್ಷೌರಿಕರು ಮತ್ತು ದೋಬಿಗಳದ್ದು ಸಹ ಇದೇ ಪರಿಸ್ಥಿತಿ ಇದ್ದು, ಸರ್ಕಾರ ಅವರಿಗೂ 5,000 ರೂ. ಪರಿಹಾರ ಘೋಷಿಸಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಚಾಸಿ ನಂಬರ್ ಮತ್ತು ಇತರೆ ವಿವರಗಳನ್ನು ಸ್ವೀಕರಿಸುತ್ತಿಲ್ಲ. ಅನೇಕ ಸಂದರ್ಭಗಳಲ್ಲಿ, ಎರರ್ ನಿಂದಾಗಿ ಚಾಲಕರ ಪರವಾನಗಿ ಮತ್ತು ಆಧಾರ್ ಅನ್ನು ಸ್ವೀಕರಿಸಲಾಗುವುದಿಲ್ಲ. ಈ ಪೋರ್ಟಲ್ ಫೋನ್‌ ಅಥವಾ ಮನೆ ಕಂಪ್ಯೂಟರ್‌ಗಳಲ್ಲಿ ಲೋಡ್ ಆಗುವುದಿಲ್ಲ. ಹೀಗಾಗಿ ಚಾಲಕರು ಸೈಬರ್‌ಕಫೆಗೆ ಅಥವಾ ಸೇವಾ ಸಿಂಧು ಕೌಂಟರ್‌ಗಳಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ಅವರು ಹಣ ನೀಡಬೇಕಾಗುತ್ತದೆ ಎಂದು ಓಲಾ-ಉಬರ್ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದ್ದಾರೆ.

ಪೋರ್ಟಲ್ ಒಂದು ಚಾಸಿ ಸಂಖ್ಯೆಗೆ ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್‌ಗಳನ್ನು ಸ್ವೀಕರಿಸುವುದಿರುವುದು ಚಾಲಕರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಡಿಎಲ್ ಅನ್ನು ಪರಿಗಣಿಸಿ ಎಲ್ಲಾ ಚಾಲಕರಿಗೂ ಪರಿಹಾರ ನೀಡಬೇಕು ಎಂದು ನಾವು ಸಾರಿಗೆ ಇಲಾಖೆಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ 5000 ರೂ.ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಪರಿಹಾರ ಧನ ನೀಡಲು ಅರ್ಜಿಗಳನ್ನು ಆನ್‌ಲೈನ್‌ಗಳಲ್ಲಿ  ಸೇವಾಸಿಂಧು ಪೋರ್ಟಲ್‌ಗಳ ಮೂಲಕ ಸ್ವೀಕರಿಸಲಾಗುತ್ತಿದೆ.

SCROLL FOR NEXT