ರಾಜ್ಯ

ಬೆಂಗಳೂರಿನಲ್ಲಿ ವರುಣನ ಅವಾಂತರ, ಹಲವೆಡೆ ಧರೆಗುರುಳಿದ ಮರಗಳು!

Nagaraja AB

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆ ಹಲವೆಡೆ ಸಾಕಷ್ಟು ಅವಾಂತರಕ್ಕೆ ಕಾರಣವಾಗಿದೆ. ಭಾರೀ ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿ ಬಿದಿದ್ದು, ವಾಹನ ಸವಾರರು ತೀವ್ರ ಪರದಾಡುವಂತಾಯಿತು.

ಅರಮನೆ ಮೈದಾನ, ಗುಟ್ಟಹಳ್ಳಿ, ಪ್ಯಾಲೇಶ್ ರಸ್ತೆ, ಕಾವೇರಿ ಜಂಕ್ಷನ್, ಸಂಪಿಗೆ ರಸ್ತೆ ಮತ್ತಿತರ ಹಲವು ಕಡೆಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಮರಗಳು ನೆಲಕ್ಕೆ ಉರುಳಿ ಬಿದಿದ್ದು, ಇವುಗಳನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಹರಸಾಹಸಪಡುವಂತಾಯಿತು.

ಸತತ ಮಳೆಯಿಂದಾಗಿ ಡಾ. ರಾಜ್ ಕುಮಾರ್ ರಸ್ತೆ ಮೇಲೆ ಬಿದಿದ್ದ ಮರದಿಂದಾಗಿ ಸುಬ್ರಮಣ್ಯಪುರ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳುವ ವಾಹನ ಸವಾರರಿಗೆ ತೀವ್ರ ರೀತಿಯ ತೊಂದರೆ ಉಂಟಾಗಿತ್ತು.ನಂತರ ಪಾಲಿಕೆ ಸಿಬ್ಬಂದಿ ಹರಸಾಹಸಪಟ್ಟು ಮರವನ್ನು ತೆರವುಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪಾಲಿಕೆ ಆಯುಕ್ತ ಬಿ.ಹೆಚ್ . ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಳೆಯಿಂದಾಗಿ ಆಗಿರುವ ನಷ್ಟದ ಬಗ್ಗೆ ಪರಿಶೀಲನೆ ನಡೆಸಿದರು. 

ಚಾಮರಾಜಪೇಟೆಯಲ್ಲಿ ಬೃಹದಾಕಾರದ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಸಂಪೂರ್ಣವಾಗಿ ಜಖಂಗೊಂಡಿರುವ ಘಟನೆ ನಡೆದಿದೆ. ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯಿಂದಾಗಿ ರಸ್ತೆ ಮೇಲೆ ನೀರು ತುಂಬಿ ಕೆರೆಯಂತಾಗಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಇಡೀ ರಾತ್ರಿ ಪರದಾಡುವಂತಾಗಿದೆ.

SCROLL FOR NEXT