ರಾಜ್ಯ

ದಕ್ಷಿಣ ಕನ್ನಡ, ಉಡುಪಿಗೆ ಕೊರೋನಾಘಾತ: ಕರಾವಳಿಗೆ ಕಂಟಕವಾದ ಮಹಾರಾಷ್ಟ್ರ ಸೋಂಕು

Manjula VN

ಮಂಗಳೂರು: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಕೊರೋನಾ ಸ್ಫೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ 53 ಮಂದಿಯಲ್ಲಿ ಹೊಸದಾಗಿ ವೈರಸ್ ದೃಢಪಟ್ಟಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 24 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದರೆ, ಉಡುಪಿಯಲ್ಲಿ 29 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರೂವರೆಗೆ ಕೊರೋನಾ ಸೋಂಕಿತರ ಸಂಖ್ಯೆ ಶತಕ ದಾಟಿದ್ದು, ಸೋಂಕಿತರ ಸಂಖ್ಯೆ 105ಕ್ಕೆ ತಲುಪಿದೆ. ಇದೇ ವೇಳೆ ಒಂದೇ ದಿನ 10 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಆರೋಗ್ಯ ಇಲಾಖೆಯ ಬೆಳಗಿನ ಬುಲೆಟಿನ್ ನಲ್ಲಿ 6 ಮಂದಿಗೆ ಸೋಂಕು ದೃಢಪಟ್ಟಿತ್ತು. ಇದರಲ್ಲಿ 5 ಮಂದಿ ಮುಂಬೈನಿಂದ ಬಂದವರಾಗಿದ್ದಾರೆ, ಒಬ್ಬಾಕೆ ಕೇರಳದಿಂದ ತಲಪಾಡಿ ಗಡಿ ಮೂಲಕ ಮಂಗಳೂರಿಗೆ ಬಂದಿದ್ದಾರೆ. ಸಂಜೆಯ ಬುಲೆಟಿನ್ ನಲ್ಲಿ ಮತ್ತೆ 18 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ. 

ಇವರೆಲ್ಲರೂ ಮುಂಬೈನಿಂದ ಆಗಮಿಸಿ ಕ್ವಾರಂಟೈನ್ ನಲ್ಲಿದ್ದವರು. ಮಹಾರಾಷ್ಟ್ರದಿಂದ ಸೋಂಕು ಕರಾವಳಿ ಜಿಲ್ಲೆಗೆ ಈಗ ಕಂಟಕವಾಗಿ ಪರಿಣಮಿಸಿದೆ. ಮುಂಬೈನಿಂದ ಆಗಮಿಸಿ ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದವರು ಹಾಗೂ ಕ್ವಾರಂಟೈನ್ ಅವಧಿ ಮುಗಿಸಿದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಇನ್ನು ಕಳೆದೆರಡು ದಿನಗಳಲ್ಲಿ ಒಂದಂಕಿಯಲ್ಲಿದ್ದ ಉಡುಪಿ ಜಿಲ್ಲೆಯ ಕೊರೋನಾ ಪ್ರಕರಣಗಳ ಸಂಖಅಯೆ ನಿನ್ನೆ ಮತ್ತೆ 29ಕ್ಕೆ ಜಿಗಿದಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 149ಕ್ಕೆ ಏರಿಕೆಯಾಗಿದೆ. 

ನಿನ್ನೆ ಪತ್ತೆಯಾದ ಸೋಂಕಿತರಲ್ಲಿ 20 ಮಂದಿ ಪುರುಷರು, 8 ಮಹಿಳೆಯರು ಮತ್ತು ಒಬ್ಬ ಬಾಲಕಿ ಸೇರಿದ್ದಾರೆ. ಅವರಲ್ಲಿ 26 ಮಂದಿ ಮಹಾರಾಷ್ಟ್ರದಿಂದ ಬಂದವರಾದರೆ, 2 ಮಂದಿ ತೆಲಂಗಾಣದಿಂದ ಮತ್ತು ಒಬ್ಬರು ಕೇರಳದಿಂದ ಬಂದವರಾಗಿದ್ದಾರೆ. 

SCROLL FOR NEXT