ರಾಜ್ಯ

ಮೈಸೂರು: 2 ವಾರಗಳಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು ಶೇ.75 ರಷ್ಟು ಇಳಿಕೆ

Srinivas Rao BV

ಕೊರೋನಾ ವೈರಸ್ ನಿಯಂತ್ರಣದಲ್ಲಿ ಮೈಸೂರು ಗಣನೀಯ ಪ್ರಮಾಣದ ಸಾಧನೆ ತೋರಿದ್ದು ಕಳೆದ 2 ವಾರಗಳಲ್ಲಿ ಕೋವಿಡ್-19 ಪ್ರಕರಣಗಳು ಶೇ.75 ರಷ್ಟು ಇಳಿಕೆ ಕಂಡಿದೆ.

ದಸರಾ ನಡುವೆಯೂ ಮೈಸೂರಿನಲ್ಲಿ ಸೋಂಕು ಪ್ರಮಾಣ ಕುಸಿತ ಕಂಡಿರುವುದು ಗಮನಾರ್ಹ ಸಾಧನೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಜಿಲ್ಲೆಯಲ್ಲಿ 10 ದಿನಗಳ ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಕೋವಿಡ್-19 ಶೀಘ್ರವಾಗಿ ಹರಡುವ ಭೀತಿ ಎದುರಾಗಿತ್ತು. ಆದರೆ ಈಗ ಆರೋಗ್ಯ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತ ಈ ಭೀತಿಯನ್ನು ಸುಳ್ಳು ಮಾಡಿದ್ದು, ಅ.17 (ದಸರಾ ಉದ್ಘಾಟನೆಯ ದಿನ)ದಿಂದ ನವೆಂಬರ್.1 ವರೆಗೆ ಕೊರೋನಾ ಪ್ರಕರಣಗಳು ಇಳಿಕೆ ಕಂಡಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ.  ಅ.17 ರಂದು 7,246 ಪ್ರಕರಣಗಳಿತ್ತು. ಆದರೆ ನವೆಂಬರ್ 1 ರಂದು ಕೇವಲ 1,582 ಪ್ರಕರಣಗಳು ವರದಿಯಾಗಿದ್ದು, 47,831 ಸೋಂಕಿತರ ಪೈಕಿ 45,290 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಕಳೆದ ಎರಡು ವಾರಗಳ ಹಿಂದೆ ಜಿಲ್ಲೆಯಲ್ಲಿ ಚೇತರಿಕೆ ಪ್ರಮಾಣ ಶೇ.81.7 ರಷ್ಟಿದ್ದದ್ದು ಈಗ ಶೇ.94.6 ರಷ್ಟಕ್ಕೆ ಏರಿಕೆಯಾಗಿದ್ದು, ರಾಜ್ಯ ಚೇತರಿಕೆ ಪ್ರಮಾಣದ ಸರಾಸರಿಗಿಂತಲೂ ಮೈಸೂರಿನ ಚೇತರಿಕೆ ಪ್ರಮಾಣ ಅಧಿಕವಾಗಿದೆ.

ಮೈಸೂರಿನ ಈ ಸಾಧನೆಗೆ ದಸರಾ ಅವಧಿಯಲ್ಲಿ ಜಿಲ್ಲಾಡಳಿತ ವಿಧಿಸಿದ್ದ ನಿಬಂಧನೆಗಳ ಕಟ್ಟುನಿಟ್ಟಾದ ಪಾಲನೆ ಹಾಗೂ ಟೆಸ್ಟಿಂಗ್ ಏರಿಕೆ ಮಾಡಿರುವುದೇ ಕಾರಣ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಬಂಗಾಳದ ದುರ್ಗಾ ಪೂಜೆ ಹಾಗೂ ಕೇರಳದ ಓಣಂ ಸಂದರ್ಭಗಳಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆ ಕಂಡಿತ್ತು. ಆದರೆ ದಸರಾ ನಡುವೆಯೂ ಕೋವಿಡ್-19 ಏರಿಕೆಯಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯೆ ನೀಡಿದ್ದು, ಜಿಲ್ಲಾಡಳಿತ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತ್ತು ಹಾಗೂ ಅವುಗಳು ಕಟ್ಟುನಿಟ್ಟಗಿ ಪಾಲನೆ ಮಾಡುವಂತೆ ನೋಡೊಕೊಂಡಿತ್ತು. ಇದಕ್ಕಾಗಿ ಎಲ್ಲಾ ಇಲಾಖೆಗಳೂ ಸಮನ್ವಯದಿಂದ ಕೆಲಸ ಮಾಡಿದ್ದು ಅದರ ಫಲಿತವಾಗಿ ಕೋವಿಡ್-19 ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದ್ದಾರೆ.

SCROLL FOR NEXT