ರಾಜ್ಯ

ಕಾರ್ಯಕರ್ತರ ಮನೆ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿ: ಸಿಪಿಎಂಎಲ್ ಕೇಂದ್ರ ಸಮಿತಿ ಒತ್ತಾಯ

Sumana Upadhyaya

ಬೆಂಗಳೂರು: ಜಮ್ಮು-ಕಾಶ್ಮೀರ, ದೆಹಲಿ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ನಾಗರಿಕ ಸೇವಾ ಕಾರ್ಯಕರ್ತರ ಮೇಲೆ ನಡೆದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ದಾಳಿಯನ್ನು ಸಿಪಿಎಂಎಲ್ ತೀವ್ರವಾಗಿ ಖಂಡಿಸಿದೆ.

ಉಗ್ರಗಾಮಿಗಳ ಹಣ ಸಂಗ್ರಹಣೆಯನ್ನು ತಗ್ಗಿಸಲು ಅಕ್ರಮ ಪತ್ತೆಹಚ್ಚಲು ಈ ದಾಳಿ ನಡೆಸಲಾಗಿದೆ ಎಂದು ಎನ್ಐಎ ಹೇಳಿದರೂ ಕೂಡ ಜಮ್ಮು-ಕಾಶ್ಮೀರದ ಜನರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಾರ್ಯಕರ್ತರ ಮೇಲೆ ದಾಳಿ ನಡೆಸಿರುವುದು ಪಾರದರ್ಶಕತೆಯ ಮೇಲೆ ನಡೆದ ದೌರ್ಜನ್ಯವಾಗಿದ್ದು ಹೋರಾಟಗಾರರನ್ನು ಮೌನವಾಗುವಂತೆ ಮಾಡುವ ಕ್ರಮವಾಗಿದೆ ಎಂದು ಸಿಪಿಎಂಎಲ್ ಹೇಳಿದೆ.

ಮಾನವ ಹಕ್ಕು ಹೋರಾಟಗಾರರು, ಮಾನವೀಯ ನೆಲೆಯಲ್ಲಿ ಕೆಲಸ ಮಾಡುವ ಸಂಘಟನೆಗಳು, ಪತ್ರಕರ್ತರು, ನಾಗರಿಕರ ವಿರುದ್ಧ ಕೇಂದ್ರದ ಮೋದಿ ಸರ್ಕಾರ ನಿಯಂತ್ರಣ ಸಾಧಿಸುತ್ತಿದ್ದು ಜಮ್ಮು-ಕಾಶ್ಮೀರ ಜನರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಅಪರಾಧಗಳನ್ನು ಮುಚ್ಚಿಹಾಕಲು ನೋಡುತ್ತಿದೆ ಎಂದು ಆರೋಪಿಸಿದೆ.

ಎನ್ಐಎ ಗುರಿಯಿಟ್ಟಿರುವ ಗುಂಪುಗಳು ಮತ್ತು ವ್ಯಕ್ತಿಗಳು ಮಾನವೀಯ ಕಾರ್ಯದ ಸುದೀರ್ಘ ಮತ್ತು ಪ್ರಭಾವಶಾಲಿ ದಾಖಲೆಯನ್ನು ಹೊಂದಿದ್ದಾರೆ. ಉದಾಹರಣೆಗೆ, ಜಮ್ಮು ಕಾಶ್ಮೀರ ಸಿವಿಲ್ ಸೊಸೈಟಿ ಒಕ್ಕೂಟ(ಜೆಕೆಸಿಸಿಎಸ್) ನಕಲಿ ಎನ್ ಕೌಂಟರ್, ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯ, ಜಮ್ಮು-ಕಾಶ್ಮೀರದಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಪರಿಣಾಮಗಳ ಕುರಿತು ವರದಿಗಳನ್ನು ದಾಖಲಿಸಿದೆ. ಹೀಗಿರುವಾಗ ದಾಳಿ ನಡೆಸಿರುವುದು ಕುಕೃತ್ಯಗಳನ್ನು ಮುಚ್ಚಿಹಾಕುವ ಯತ್ನ ಎಂದು ಹೇಳಿದ್ದಾರೆ.

SCROLL FOR NEXT