ರಾಜ್ಯ

ಕೋವಿಡ್-19: ರಾಜ್ಯದಲ್ಲಿ ಚೇತರಿಕೆ ಪ್ರಮಾಣದಲ್ಲಿ ಏರಿಕೆ, ಸಕ್ರಿಯ ಪ್ರಕರಣಗಳು ಗಣನೀಯ ಸಂಖ್ಯೆಯಲ್ಲಿ ಇಳಿಕೆ!

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಮತ್ತಷ್ಟು ಕಡಿಮೆಯಾಗುತ್ತಿದ್ದು, ಸುಮಾರು 2 ತಿಂಗಳ ಬಳಿತ ಸೋಮವಾರ ಅತ್ಯಂತ ಕಡಿಮೆ 2,576 ಜನರಲ್ಲಿ ಸೋಂಕು ಪತ್ತೆಯಾಗಿದೆ. 

ಜುಲೈನಿಂದ ಅಕ್ಟೋಬರ್ ಮೊದಲ ವಾರದವರೆಗೆ ಸೋಂಕಿನ ಪ್ರಕರಣ ಸತತವಾಗಿ ಏರಿಕೆಯಾಗಿ ದಿನಕ್ಕೆ 10 ಸಾವಿರಕ್ಕೂ ಹೆಚ್ಚಿರುತ್ತಿತ್ತು. ಆದರೆ, ಅಕ್ಟೋಬರ್ 15ರಿಂದ ಸೋಂಕಿನ ಪ್ರಮಾಣ ಇಳಿಮುಖದತ್ತ ಸಾಗುತ್ತಿದೆ. 

ಸೋಮವಾರ 2,576 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಬರೋಬ್ಬರಿ 8,334 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 29 ಮಂದಿ ಸೋಂಕಿತರು ಅಸುನೀಗಿದ್ದಾರೆ. 

ಹೊಸ ಸೋಂಕಿನ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಸತತವಾಗಿ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 10ರ ಹೊತ್ತಿಗೆ 1.20 ಲಕ್ಷವಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 44 ಸಾವಿರಕ್ಕೆ ಇಳಿದಿದೆ. ಸದ್ಯ 931 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 8.29 ಲಕ್ಷ ಮಂದಿ ಸೋಂಕಿನಿಂದ ಬಾಧಿತರಾಗಿದ್ದು, ಇವರಲ್ಲಿ 7.33 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 

ಕೊರೋನಾದಿಂದ ಮೃತರಾಗುತ್ತಿರುವವರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ರಾಜ್ಯದ ಒಟ್ಟಾರೆ ಮರಣ ದರ (ಮಾರ್ಚ್ ನಿಂದ ಇಲ್ಲಿಯವರೆಗೆ) ಶೇ.1.35ರಷ್ಟಿದ್ದರೆ, ಸೋಮವಾರದ ಮರಣ ದರ ಶೇ.1.12ರಷ್ಟಿತ್ತು. ಒಟ್ಟು 11,221 ಮಂದಿ ಈ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. 

ಸೋಮವಾರ 78,496 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರಲ್ಲಿ 65 ಸಾವಿರಕ್ಕಿಂತ ಹೆಚ್ಚು ಆರ್'ಟಿಪಿಸಿಆರ್ ಪರೀಕ್ಷೆಗಳಿವೆ. ಈ ವರೆಗೆ ಒಟ್ಟು 8.91 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ.

SCROLL FOR NEXT