ರಾಜ್ಯ

ರೈಲ್ವೇ ಬ್ಯಾರಿಕೇಡ್'ಗೆ ಸಿಲುಕಿ ಆನೆ ಸಾವು

Manjula VN

ಬೆಂಗಳೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸರಗೂರು ತಾಲೂಕಿನ ಮೊಳೆಯೂರು ವಲಯ ಅರಣ್ಯದಲ್ಲಿ ಆನೆಯೊಂದು ನಿತ್ರಾಣಗೊಂಡು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದ್ದು, ರೈಲ್ವೇ ಕಂಬಿಗೆ ಸಿಲುಕಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. 

ತಾಲೂಕಿನ ನಡಾಡಿ ಗ್ರಾಮದ ಸಮೀಪದಲ್ಲಿರುವ ಅರಣ್ಯದಂಚಿನಲ್ಲಿ 14ರಿಂದ 16 ವರ್ಷದ ಗಂಡಾನೆ ಮೃತಪಟ್ಟಿದ್ದು, ಆನೆ ಮೇವು ಅರಸಿ ಕಾಡಿನಿಂದ ನಾಡಿನತ್ತ ಬರುವಾಗ ಕಂದಕ ದಾಟಲಾಗದೇ ನಿತ್ರಾಣಗೊಂಡು ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. 

ಮೃತಪಟ್ಟ ಕಾಡನೆಯ ಮುಂದಿನ ಎಡಕಾಲಿನಲ್ಲಿ ರೈಲ್ವೇ ಕಂಬಿಗೆ ಸಿಲುಕಿರುವ ಗುರುತುಗಳು ಪತ್ತೆಯಾಗಿವೆ. ಇದಲ್ಲದೆ ಆನೆ ಶವ ಪರೀಕ್ಷೆ ಮಾಡುವ ವೇಳೆ ರೈಲ್ವೇ ಕಂಬಿಯನ್ನು ಕಳಚಲಾಗಿದೆ. ಹೀಗಾಗಿ ಎರಡು ಮೂರು ದಿನಗಳ ಹಿಂದೆಯೇ ಕಂದಕದ ಸಮೀಪದಲ್ಲಿರುವ ರೈಲ್ವೇ ಕಂಬಿಗೆ ಸಿಲುಕಿ ಮೃತಪಟ್ಟಿರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. 

ಘಟನಾ ಸ್ಥಳಕ್ಕೆ ಬಂಡೀಪುರ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ, ಅರಣ್ಯ ಸಂರಕ್ಷಣಾಧಿಕಾರಿ ನಟೇಶ್, ಎಸಿಎಫ್ ರವಿಕುಮಾರ್, ಮೊಳೆಯೂರು ಆರ್'ಎಫ್ಒ ಪುಟ್ಟರಾಜು, ಅರಣ್ಯ ರಕ್ಷಕ ವೆಂಕಟೇಶ್ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. 

ವೈದ್ಯಾಧಿಕಾರಿ ಡಾ.ನಾಗರಾಜ್ ಆನೆ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮರಣೋತ್ತರ ವರದಿ ಬಂದ ನಂತರ ನಿಖರ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

SCROLL FOR NEXT