ರಾಜ್ಯ

ರಾಜ್ಯದಲ್ಲಿ 'ಲವ್ ಜಿಹಾದ್' ಅಸ್ತಿತ್ವದಲ್ಲಿಲ್ಲದಿದ್ದರೂ ಕಾನೂನು ಸ್ವಾಗತಿಸಲು ಸಿದ್ಧ ಎಂದ ಕಮಲ ಪಾಳಯ

Manjula VN

ಬೆಂಗಳೂರು: ಉತ್ತರಪ್ರದೇಶ ರಾಜ್ಯದ ಮಾದರಿಯಲ್ಲೇ ರಾಜ್ಯದಲ್ಲಿಯೂ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಲು ಚಿಂತನೆಗಳು ನಡೆಯುತ್ತಿವೆ. 

ರಾಜ್ಯದಲ್ಲಿಯೂ ಇಂತಹ ಕಾನೂನು ರೂಪಿಸಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ಹೇಳಿದ್ದಾರೆ. ಇದರಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ಈ ಚಿಂತನೆಗಳಿಗೆ ಬೆಂಬಲ ಸೂಚಿಸಿದ್ದಾರೆ. ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಯಾಗಿದ್ದೇ ಆದರೆ, ಅದನ್ನು ಸ್ವಾಗತಿಸುತ್ತೇನೆಂದು ಹೇಳಿದ್ದಾರೆ. 

ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ವಿವಾಹವಾದಾಗ ಲವ್ ಜಿಹಾದ್ ಎಂಬ ಪದವನ್ನು ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತಿದೆ. ಧರ್ಮದ ಮತಾಂತರ ದುರುದ್ದೇಶದಿಂದ ಇಂತಹ ವಿವಾಹ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಕರ್ನಾಟಕ ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತಂದಿದ್ದೇ ಆದರೆ, ಅದನ್ನು ಸ್ವಾಗತಿಸುತ್ತೇವೆಂದು ಜೋಶಿಯವರು ಟ್ವೀಟ್ ಮಾಡಿದ್ದಾರೆ. 

ಬಿಜೆಪಿ ಆಡಳಿತಾರೂಢ ರಾಜ್ಯಗಳಾದ ಉತ್ತರಪ್ರದೇಶದಿಂದ ಕರ್ನಾಟಕದವರೆಗೂ ಎಲ್ಲಾ ಮುಖ್ಯಮಂತ್ರಿಗಳು ಲವ್ ಜಿಹಾದ್ ಕುರಿತು ಧ್ವನಿ ಎತ್ತುತ್ತಿರುವ ನಡುವಲ್ಲೇ ಈ ಪದವು ಅಸ್ತಿತ್ವದಲ್ಲಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ಘೋಷಿಸಿದೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಹೇಳಿಕೆ ನೀಡಿದ್ದ ಸಚಿವ ಕಿಶನ್ ರೆಡ್ಡಿಯವರು, “ಲವ್ ಜಿಹಾದ್” ಎಂಬ ಪದವನ್ನು ಈಗಿರುವ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ ಎಂದು ಹೇಳಿದ್ದರು. 

ಈ ನಡುವೆ ಕೇಂದ್ರ ತನಿಖಾ ಸಂಸ್ಥೆಗಳಲ್ಲಿ ಈ ವರೆಗೂ ಯಾವುದೇ ಲವ್ ಜಿಹಾದ್ ಪ್ರಕರಣಗಳೂ ದಾಖಲಾಗಿಲ್ಲ. ಇಂತಹ ವಿದ್ಯಮಾನದ ಅಸ್ತಿತ್ವವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ತಳ್ಳಿಹಾಕಿದ್ದು ಇದೇ ಮೊದಲಾಗಿದೆ. 

ನಿನ್ನೆಯಷ್ಟೇ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸಿದ್ದು, ಸಭೆಯಲ್ಲಿ ಲವ್ ಜಿಹಾದ್ ನಿಷೇಧಿಸಲು ಕಾನೂನು ರೂಪಿಸುವ ಕುರಿತಂತೆಯೂ ಮಾತುಕತೆ ನಡೆಸಲಾಗಿದೆ. ‘ಲವ್ ಜಿಹಾದ್’ ನಿಷೇಧಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಬೇರೆ ರಾಜ್ಯಗಳು ನಿರ್ಧಾರ ಕೈಗೊಳ್ಳುವವರೆಗೂ ನಾವು ಕಾಯುವುದಿಲ್ಲ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. 

ವಿವಾಹಕ್ಕಾಗಿ ಧರ್ಮ ಮತಾಂತರ ಮಾಡುವುದನ್ನು ನಿಷೇಧಿಸಲು ಕಠಿಣ ಕಾನೂನು ಜಾರಿಗೆ ತರಲಾಗುತ್ತದೆ. ಮೋಹಗಳ ಮೂಲಕ ಮಹಿಳೆಯರನ್ನು ಮತಾಂತರಕ್ಕೆ ಬಲೆಗೆ ಬೀಳಿಸುವುದನ್ನು ಸಹಿಸುವುದಿಲ್ಲ ಸಭೆ ಬಳಿಕ ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ. 

ಬಲವಂತದ ಧರ್ಮ ಮತಾಂತರಗಳ ಬಗ್ಗೆ ನ್ಯಾಯಾಲಯ ಈಗಾಗಲೇ ಸ್ಪಷ್ಟ ಆದೇಶಗಳನ್ನು ನೀಡಿದೆ. ಧರ್ಮ ಸ್ವಾತಂತ್ರ್ಯ ಹಕ್ಕು, ಬಲವಂತವಾಗಿ, ವಂಚನೆ ಮಾಡಿ, ವೈಯಕ್ತಿಕ ಲಾಭಕ್ಕಾಗಿ ಮತಾಂತರ ಮಾಡುವುದು ಮಾನ್ಯವಾಗಿರುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಇದಕ್ಕೆ ಪ್ರತ್ಯೇಕ ಕಾನೂನಿನ ಅಗತ್ಯವಿಲ್ಲ ಎಂದು ರಾಜಕೀಯ ವಿಶ್ಲೇಷಕ ಡಾ.ಸಂದೀಪ್ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. 

“ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪು ವಂಚನೆ, ಆಮಿಷ ಅಥವಾ ವೈಯಕ್ತಿಕ ಲಾಭದಿಂದ ಮಾಡಿದ ಯಾವುದೇ ಮತಾಂತರವು ಮಾನ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಅದನ್ನು ಎದುರಿಸಲು ನಿಮಗೆ ಹೊಸ ಕಾನೂನು ಅಗತ್ಯವಿಲ್ಲ. ಬಲವಂತದ ಮತಾಂತರ ನಡೆಯುತ್ತಿದೆ ಎಂಬ ಅಭಿಪ್ರಾಯವಿದ್ದರೆ, ಈಗಿರುವ ಕಾನೂನುಗಳಿವೆ ”ಎಂದು ರಾಜಕೀಯ ವಿಜ್ಞಾನಿ ಡಾ.ಸಂದೀಪ್ ಶಾಸ್ತ್ರಿ ಹೇಳಿದರು.

“ನೀವು ಲವ್ ಜಿಹಾದ್ ಅನ್ನು ಕಾನೂನುಬದ್ಧವಾಗಿ ಹೇಗೆ ವ್ಯಾಖ್ಯಾನಿಸುತ್ತೀರಿ? ಕಾನೂನು ಅಂತರ್-ಧರ್ಮ ವಿವಾಹಕ್ಕೆ ಮಾತ್ರವೇ ಆಗಲಿದೆಯೇ? ಹಿಂದೂ ಮತ್ತು ಮುಸ್ಲಿಂ ಅಥವಾ ಯಾವುದೇ ಎರಡು ಧರ್ಮಗಳ ಮದುವೆಗೆ ಮಾತ್ರ ಅನ್ವಯವಾಗುತ್ತದೆಯೇ? ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗನ ಮದುವೆಗೆ ಅನ್ವಯವಾಗುತ್ತದೆಯೇ ಅಥವಾ ಅದು ಬೇರೆ ರೀತಿಯಲ್ಲಿಯೂ ಅನ್ವಯವಾಗುತ್ತದೆಯೇ? ಧರ್ಮ ಮತಾಂತರದ ವಿರುದ್ಧದ ಕಾನೂನು ಎಲ್ಲಾ ಧರ್ಮದವರಿಗೂ ಅನ್ವಯವಾಗಬೇಕು. ಇಲ್ಲದೇ ಹೋದರೆ ಧರ್ಮದ ಹಕ್ಕನ್ನು ಉಲ್ಲಂಘಿಸುತ್ತದೆಯೇ ಎಂಬುದನ್ನು ನೋಡಲು ನ್ಯಾಯಾಲಯದ ಪರಿಶೀಲನೆಗೆ ಹೋಗಬೇಕಾಗುತ್ತೆದ ಎಂದು ತಿಳಿಸಿದ್ದಾರೆ. 

SCROLL FOR NEXT