ರಾಜ್ಯ

ಹಾವೇರಿ: ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವ್ಯಕ್ತಿ ಬಂಧನ

Lingaraj Badiger

ಹಾವೇರಿ: ಹಿರೋ ಹೊಂಡಾ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಜಾರ್ಖಂಡ ಮೂಲದ 24 ವರ್ಷದ ಅಜಯಕುಮಾರ ಯಾದವ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶುಕ್ರವಾರ ಮಧ್ಯಾಹ್ನದ ಸಮಯದಲ್ಲಿ ಬ್ಯಾಡಗಿ ಠಾಣಾ ವ್ಯಾಪ್ತಿಯ ಛತ್ರದಿಂದ ಆಲಗೇರಿ ಕಡೆಗೆ ಹೋಗುವ ರಸ್ತೆಯಲ್ಲಿ ಆಂತರಿಕ ಭದ್ರತಾ ವಿಭಾಗದ ಹಾವೇರಿ-ಗದಗ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಜಯಕುಮಾರ ಯಾದವನನ್ನು ಬಂಧಿಸಿದ್ದಾರೆ.

ಆರೋಪಿಯು ದ್ವಿಚಕ್ರ ವಾಹನದಲ್ಲಿ ಒಂದು ರಟ್ಟಿನ ಬಾಕ್ಸ್ ನಲ್ಲಿ ಕಾನೂನುಬಾಹಿರವಾಗಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಸಂಶಯಗೊಂಡು ವ್ಯಕ್ತಿಯನ್ನು ತಡೆದು ವಿಚಾರಿಸಲಾಗಿದೆ. 

ಆರೋಪಿ ಜಾರ್ಖಂಡ್ ರಾಜ್ಯದ ಕೊಡೆರ್ಮಾ ತಾಲೂಕಿನ ಚೋಪ್ನಾದಿ ನಿವಾಸಿಯಾಗಿದ್ದು, ವೆಂಕಟಾಪುರ ಗುತ್ತಿಗೆದಾರ ಕುಮಾರ್ ಕೆ.ಕಬ್ಬೂರ ಅವರ ಕ್ರಷರ್ ಉಸ್ತುವಾರಿ ನೋಡಿಕೊಳ್ಳುವ ರಾಣೇಬೆನ್ನೂರಿನ ಮಾಲತೇಶ ಎಂಬುವವರಿಂದ ಈ ವಸ್ತುಗಳನ್ನು ಪಡೆದುಕೊಂಡಿದ್ದ ಎನ್ನಲಾಗಿದೆ. ಕ್ವಾರಿಗಳಲ್ಲಿ ಸ್ಪೋಟಕಗಳನ್ನು ಬಳಸಲು ತೆಗೆದುಕೊಂಡು ಹೋಗುತ್ತಿದ್ದಾಗಿ ತಿಳಿಸಿದ್ದಾನೆ.

ಪೊಲೀಸರು ಸ್ಥಳದಲ್ಲಿ ದೊರೆತ ಸ್ಫೋಟಕ ಸಾಮಗ್ರಿಗಳನ್ನು ಹಾಗೂ ಸಾಗಾಣಿಕೆಗೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದೆದಿದ್ದು, ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

SCROLL FOR NEXT