ರಾಜ್ಯ

ಸಚಿವ ಸ್ಥಾನಕ್ಕೆ ವಿಶ್ವನಾಥ್, ಶಂಕರ್, ಎಂಟಿಬಿ ಪರಿಗಣನೆ ಕೋರ್ಟ್ ಆದೇಶಕ್ಕೆ ಒಳಪಟ್ಟಿರುತ್ತದೆ: ಹೈಕೋರ್ಟ್ ಮಧ್ಯಂತರ ಆದೇಶ

Manjula VN

ಬೆಂಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಮತ್ತು ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ನೀಡದಂತೆ ಸರ್ಕಾರಕ್ಕೆ ನಿರ್ಬಂಧ ವಿಧಿಸಲು ನಿರಾಕರಿಸಿರುವ ಹೈಕೋರ್ಟ್, ಈ ಮೂವರಿಗೂ ಸಚಿವ ಸ್ಥಾನ ನೀಡಿದರೆ ಅದು ನ್ಯಾಯಾಲಯದ ಮುಂದಿನ ಆದೇಶಗಳಿಗೆ ಒಳಪಟ್ಟಿರಲಿದೆ ಎಂದು ಬುಧವಾರ ಸ್ಪಷ್ಟಪಡಿಸಿದೆ. 

ಈ ಕುರಿತು ಬೆಂಗಳೂರಿನ ವಕೀಲ ಎ.ಹರೀಶ ಹಾಗೂ ಜಿ.ಮೋಹನ್ ಕುಮಾರ್ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು, ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. 

ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಮೂವರೂ ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಆದರೆ, ಅರ್ಜಿ ಕುರಿತು ಆದೇಶ ಹೊರಡಿಸುವ ಮುನ್ನ ಪ್ರತಿವಾದಿಗಳ ವಾದವನ್ನೂ ಕೂಡ ಆಲಿಸಬೇಕಿದೆ. ಆದ್ದರಿಂದ, ಸರ್ಕಾರ ವಿಳಂಬ ಮಾಡದೇ ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು. ಪರಿಷತ್'ಗೆ ಅವರನ್ನು ಆಯ್ಕೆ ಮಾಡಿದ ಪ್ರಕ್ರಿಯೆಗೆ ಸಂಬಂಧಿಸಿದ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಸೂಚಿಸಿತು. 

ಅಲ್ಲದೆ, ಮೂವರಿಗೆ ಸಚಿವ ಸ್ಥಆನ ನೀಡುವ ವಿಚಾರದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಆದ ಕಾರಣ ಈ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಮುಂದಿನ ಆದೇಶಗಳಿಗೆ ಒಳಪಟ್ಟಿರಲಿದೆ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ ವಿಚಾರಣೆಯನ್ನು ನ.19ಕ್ಕೆ ಮುಂದೂಡಿತು. 

SCROLL FOR NEXT