ರಾಜ್ಯ

ಬೆಂಗಳೂರು: ಪ್ರತಿ ಮೂರು ಕೋವಿಡ್-19 ಸೋಂಕಿತರ ಪೈಕಿ ಒಬ್ಬರಲ್ಲಿ ಕಿಡ್ನಿ ಸಮಸ್ಯೆ; ತಜ್ಞರ ವರದಿ

Srinivasamurthy VN

ಬೆಂಗಳೂರು: ಮಾರಕ ಕೋವಿಡ್-19 ಸೋಂಕಿಗೆ ತುತ್ತಾಗುವ ಪ್ರತೀ ಮೂರು ಸೋಂಕಿತರ ಪೈಕಿ ಒಬ್ಬರಲ್ಲಿ ಕಿಡ್ನಿ ಸಮಸ್ಯೆ ಸಾಮಾನ್ಯವಾಗಿರುವುದನ್ನು ಗಮನಿಸಲಾಗಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

ಬೆಂಗಳೂರು ಮೂಲದ ನುರಿತ ವೈದ್ಯರ ತಂಡ ಇಂತಹುದೊಂದು ಆಘಾತಕಾರಿ ವರದಿ ನೀಡಿದ್ದು, ತಾವು ಗಮನಿಸಿದಂತೆ ಪ್ರತೀ ಮೂರು ಕೋವಿಡ್ ಸೋಂಕಿತರಲ್ಲಿ ಒಬ್ಬ ಸೋಂಕಿತರಲ್ಲಿ ತೀವ್ರ ಮೂತ್ರಪಿಂಡದ ಗಾಯ (ಎಕೆಐ) ಅಥವಾ ಕಿಡ್ನಿ ಸಮಸ್ಯೆ ಕಂಡುಬರುತ್ತಿದೆ. ಕೇವಲ ಬೆಂಗಳೂರು  ಮಾತ್ರವಲ್ಲದೇ ಪ್ರಪಂಚದ ಪ್ರಮುಖ ನಗರಗಳಾದ ಚೀನಾದ ಶಾಂಘೈ, ವುಹಾನ್ ಮತ್ತು ಅಮೆರಿಕ ನ್ಯೂಯಾರ್ಕ್ ನಗರಗಳಲ್ಲಿಯೂ ಕೋವಿಡ್ ಸೋಂಕಿಗೆ ತುತ್ತಾದ ಸೋಂಕಿತರ ಪೈಕಿ ಶೇ.30ರಷ್ಟು ಸೋಂಕಿತರಲ್ಲಿ ಕಿಡ್ನಿ ಸಮಸ್ಯೆ ಕಂಡುಬಂದಿದೆ. 

ಈ ಬಗ್ಗೆ ಮಾತನಾಡಿರುವ ಏಸ್ ಸುಹಾಸ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಜಗದೀಶ್ ಕುಮಾರ್ ಹಿರೇಮಠ್ ಅವರು, ಮೂತ್ರಪಿಂಡದ ಸೆಲ್ ಗಳ ಮೇಲೆ ಕೊರೋನಾ ವೈರಸ್ ಕಣಗಳು ಹಾನಿ ಮಾಡುತ್ತದೆ. ವೈರಸ್ ರಕ್ತ ಪ್ರವಾಹದಲ್ಲಿ ಸಣ್ಣ ಪ್ರಮಾಣದ ಹೆಪ್ಪುಗಟ್ಟುವಿಕೆಗೆ  ಕಾರಣವಾಗಬಹುದು, ಇದು ಮೂತ್ರಪಿಂಡದಲ್ಲಿ ಸಣ್ಣ ರಕ್ತನಾಳಗಳನ್ನು ಮುಚ್ಚಿಹಾಕುತ್ತದೆ ಮತ್ತು ಅದರ ಕಾರ್ಯನಿರ್ವಹಣೆಯನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ, ಸೈಟೊಕಿನ್ ಸ್ಟಾರ್ಮ್ ಗಳು ಮೂತ್ರಪಿಂಡದ ಅಂಗಾಂಶಗಳನ್ನು ನಾಶಮಾಡುತ್ತವೆ ಎಂದು  ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ರೀಗಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ  ಹಿರಿಯ ಯುರಾಲಜಿಸ್ಟ್ ಡಾ. ಸೂರು ರಾಜು ವಿ ಅವರು, ಐಸಿಯುಗಳಲ್ಲಿ ದಾಖಲಾದ ರೋಗಿಗಳಲ್ಲಿ ತೀವ್ರ ಮೂತ್ರಪಿಂಡದ ಗಾಯ (ಎಕೆಐ) ಅಭಿವೃದ್ಧಿಯಾಗುವ ಸಾಧ್ಯತೆ ಇದೆ.  ಮೂತ್ರಪಿಂಡಗಳ ಮೇಲೆ ಕೋವಿಡ್  -19 ರ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿಯಲಾಗಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. 

'ಕೋವಿಡ್ ಮೂತ್ರಪಿಂಡಗಳ ಕಾರ್ಯನಿರ್ವಹಣೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂದು ಅನೇಕ ನೆಫ್ರಾಲಜಿಸ್ಟ್‌ಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇರುವ ಕೆಲವರು ಕೋವಿಡ್ ಕಾರಣದಿಂದಾಗಿ ತೀವ್ರ ಸಮಸ್ಯೆ  ಅನುಭವಿಸಿದ್ದಾರೆ. ಇನ್ನೂ ಹೆಚ್ಚು ಆತಂಕಕಾರಿ ಸಂಗತಿಯೆಂದರೆ, ಯಾವುದೇ ಸಮಸ್ಯೆಗಳಿಲ್ಲದವರಲ್ಲಿಯೂ ಕೂಡ ಕೋವಿಡ್ ಸೋಂಕು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳನ್ನು ಬೆಳೆಸಬಹುದು. ಕೋವಿಡ್ ನಿಂದ ಚೇತರಿಸಿಕೊಂಡ ನಂತರ, ರೋಗಿಗಳು ತಮ್ಮ ಮೂತ್ರಪಿಂಡಗಳು  ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ವೈದ್ಯರನ್ನು ಭೇಟಿ ಅಗತ್ಯ ಪರೀಕ್ಷೆ ಮಾಡಿಸಿಕೊಂಡು ಪರೀಕ್ಷಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

SCROLL FOR NEXT