ರಾಜ್ಯ

ನೆಹರೂ ಅವರ ತತ್ವ, ಸಿದ್ದಾಂತ, ದೂರದೃಷ್ಟಿಯೇ ಸ್ವಾತಂತ್ರ್ಯ ಭಾರತದ ಪ್ರಗತಿಯ ಬುನಾದಿ- ಡಿ. ಕೆ. ಶಿವಕುಮಾರ್

Nagaraja AB

ಬೆಂಗಳೂರು: ಪಂಡಿತ್ ಜವಾಹರಲಾಲ್ ನೆಹರೂ ಅವರ ತತ್ವ ಸಿದ್ಧಾಂತಗಳು, ದೂರದೃಷ್ಟಿಯೇ ಸ್ವತಂತ್ರ ಭಾರತದ ಪ್ರಗತಿ ಇತಿಹಾಸದ ಭದ್ರ ಬುನಾದಿ. ಇದನ್ನು ಉಳಿಸಿಕೊಂಡು ಹೋಗಬೇಕಿರುವುದು ನಮ್ಮ ಜವಾಬ್ದಾರಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ದೇಶದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದ ಡಿಕೆ ಶಿವಕುಮಾರ್,  ಬಿಜೆಪಿ ನಾಯಕರು ದೇಶದ ಇತಿಹಾಸ ಬದಲಿಸುತ್ತೇನೆ ಎಂದರೆ ಅದು ದೇಶಕ್ಕೆ ಆಗುವ ನಷ್ಟ. ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ ಎಂದರು.

ಕಾಂಗ್ರೆಸ್ ನಾಯಕರ ಇತಿಹಾಸ ದೇಶದ ಅಭಿವೃದ್ಧಿಯ ಇತಿಹಾಸ. ಕಾಂಗ್ರೆಸ್ ನಾಯಕರ ತ್ಯಾಗ ಬಲಿದಾನವೇ ಭಾರತದ ಸ್ವಾತಂತ್ರ್ಯದ ಇತಿಹಾಸ. ನೆಹರೂ ಅವರು ತಮ್ಮ ಆಸ್ತಿಯನ್ನು ಮಾರಾಟ ಮಾಡಿ ಸ್ವಾತಂತ್ರ್ಯ ಚಳುವಳಿಗೆ ಸಹಾಯ ಮಾಡಿದ್ದರು. ಅವರು 1929ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗುವ ಮುನ್ನ, ಅಲಹಾಬಾದ್ ಪಾಲಿಕೆಯಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಪ್ರಧಾನಿ ಹುದ್ದೆಗೆ ಜವಾಹರಲಾಲ್ ನೆಹರು ಅವರ ಹೆಸರನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಸೂಚಿಸಿದ್ದರು.
ಈ ಸಂಬಂಧ ಪಟೇಲರೇ ಬರೆದಿರುವ ಪತ್ರಗಳ ದಾಖಲೆಯನ್ನ ಅವರ ಮಗಳು ಬಿಡುಗಡೆ ಮಾಡಿದ್ದಾರೆ. ಇತಿಹಾಸವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಪ್ರತಿ ವಿಚಾರದಲ್ಲಿಯೂ ನಾವು ಇತಿಹಾಸದ ಸತ್ಯದ ಕಡೆಗೆ ಗಮನ ಕೊಡಬೇಕು ಎಂದು ಹೇಳಿದರು.

SCROLL FOR NEXT