ರಾಜ್ಯ

ಕಾಲೇಜು ಪುನಾರಂಭ: ಬೆಂಗಳೂರಿನ 450 ಕಡೆ ಮೊಬೈಲ್ ಸ್ವಾಬ್ ಕಲೆಕ್ಷನ್ ತಂಡ ನಿಯೋಜನೆ

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ತಗ್ಗಿರುವಂತೆಯೇ ಕಾಲೇಜುಗಳು ಪುನಾರಂಭಗೊಳ್ಳುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಬೆಂಗಳೂರಿನ 450 ಕಡೆಗಳಲ್ಲಿ ಮೊಬೈಲ್ ಸ್ವಾಬ್ ಪರೀಕ್ಷಾ ತಂಡಗಳನ್ನು ನಿಯೋಜಿಸುತ್ತಿದೆ.

ಇದೇ ನವೆಂಬರ್ 17ರಂದು ರಾಜ್ಯ ಸರ್ಕಾರ ಕಾಲೇಜುಗಳು ಪುನಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ 450 ಮೊಬೈಲ್ ಸ್ವ್ಯಾಬ್ ಸಂಗ್ರಹ ತಂಡಗಳನ್ನು ನಗರದ ಶಿಕ್ಷಣ ಸಂಸ್ಥೆಗಳ ಬಳಿ ನಿಯೋಜಿಸಲಾಗುವುದು ಎಂದು ಬೃಹತ್ ಬೆಂಗಳೂರು  ಮಹಾನಗರ ಪಾಲಿಕೆ (ಬಿಬಿಎಂಪಿ) ಘೋಷಣೆ ಮಾಡಿದೆ.

ಈ ತಂಡಗಳು ಸಂಗ್ರಹಿಸಲಿರುವ ಸ್ವಾಬ್ ಪರೀಕ್ಷೆಗಳ ವರದಿಗಳು 24 ಗಂಟೆಗಳ ಅವಧಿಯಲ್ಲಿ ಬರಲಿದೆ. ಪರೀಕ್ಷಾ ವರದಿಗಳನ್ನು ಐಸಿಎಂಆರ್ ಪೋರ್ಟಲ್‌ ನಲ್ಲಿ ಅಪ್‌ ಲೋಡ್ ಮಾಡಲಾಗುತ್ತದೆ. ಪರೀಕ್ಷಾ ವರದಿಗಳ ಯಾವುದೇ ವಿಳಂಬ ತಪ್ಪಿಸಲು ವೈದ್ಯಕೀಯ ಅಧಿಕಾರಿಗಳು ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಪರೀಕ್ಷೆ ರಿಪೋರ್ಟ್ ಗಳನ್ನು https://www.covidwar.karnataka.gov.in/service1 ನಲ್ಲಿ ಪ್ರವೇಶಿಸಿ ಪಿಡಿಎಫ್ ಆವೃತ್ತಿಯಲ್ಲಿ ಡೌನ್‌ಲೋಡ್ ಮಾಡಬಹುದು ಎಂದು ಹೇಳಿದೆ.

ಹಲವಾರು ಶಿಕ್ಷಣ ಸಂಸ್ಥೆಗಳು/ಕಾಲೇಜುಗಳು ಇರುವಲ್ಲಿ ಹೆಚ್ಚಿನ ತಂಡಗಳನ್ನು ಇರಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು. ಅಂತೆಯೇ ಹೆಚ್ಚುವರಿಯಾಗಿ, ಬಿಬಿಎಂಪಿ ಮಿತಿಯಲ್ಲಿರುವ ಶಿಕ್ಷಣ ಸಂಸ್ಥೆಗಳು ಅಥವಾ ಕಾಲೇಜುಗಳನ್ನು ತಮ್ಮ ಹತ್ತಿರದ ನಗರ ಪ್ರಾಥಮಿಕ  ಆರೋಗ್ಯ ಕೇಂದ್ರಗಳಿಗೆ ಮ್ಯಾಪ್ ಮಾಡಲಾಗುತ್ತದೆ. ಇಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಪರೀಕ್ಷೆಗೊಳಪಡಬಹುದು.

ನಗರದಲ್ಲಿ 432 ಕಾಲೇಜುಗಳಿದ್ದು, 60,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಇದ್ದಾರೆ. ಕಾಲೇಜುಗಳು ಆರಂಭದಲ್ಲಿ ಸುಮಾರು ಶೇ.30ರಷ್ಟು ವಿದ್ಯಾರ್ಥಿಗಳ ಹಾಜರಾತಿಯನ್ನು ನಿರೀಕ್ಷಿಸಲಾಗುತ್ತಿದೆ ಮತ್ತು ನಮ್ಮ ಬಿಬಿಎಂಪಿ ಸ್ವ್ಯಾಬ್ ಸಂಗ್ರಹ ಘಟಕಗಳಲ್ಲಿ ಈ ಜನಸಂಖ್ಯೆಯನ್ನು 1-2  ದಿನಗಳಲ್ಲಿ ಪರೀಕ್ಷೆ ಮಾಡಬಹುದು. ವಿದ್ಯಾರ್ಥಿಗಳು ಕ್ರಮೇಣ ಕಾಲೇಜುಗಳಿಗೆ ಬರಲು ಪ್ರಾರಂಭಿಸುವ ನಿರೀಕ್ಷೆಯಿರುವುದರಿಂದ, ನಂತರದ ದಿನಗಳಲ್ಲಿ ಪರೀಕ್ಷಿಸಲು ತಂಡಗಳನ್ನು ಕಾಲೇಜುಗಳ ಬಳಿ ನಿಯೋಜಿಸಲಾಗುವುದು ಎಂದು ಹೇಳಿದರು.

SCROLL FOR NEXT