ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಶಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ 3 ತಿಂಗಳುಗಳ ವೇತನಗಳ ಮೊತ್ತ 634 ಕೋಟಿ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ಅಕ್ಟೋಬರ್, ನವಂಬರ್ ಹಾಗೂ ಡಿಸೇಂಬರ್ ಈ 3 ತಿಂಗಳುಗಳ ಸಂಬಳದ ಒಟ್ಟು ಮೊತ್ತವಾದ 634 ಕೋಟಿ 50 ಲಕ್ಷ ರೂ. ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದರಿಂದಾಗಿ ಸಾರಿಗೆ ಸಿಬ್ಬಂದಿಗಳ ಒಟ್ಟು ಮೂರು ತಿಂಗಳುಗಳ ಶೇಕಡ 75 ರಷ್ಟು ವೇತನದ ಮೊತ್ತ 634.50 ರೂಪಾಯಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಕ್ರಮ ಕೈಗೊಂಡಂತಾಗಿದೆ. ಉಳಿದ ಶೇಕಡ 25 ರಷ್ಟು ವೇತನಗಳನ್ನು ಸಾರಿಗೆ ಸಂಸ್ಥೆಗಳೇ ತಮ್ಮ ಸಂಪನ್ಮೂಲಗಳಿಂದ ಭರಿಸಲಿವೆ.
ಇದರಿಂದಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳ ಸುಮಾರು 1,30,000 ಸಿಬ್ಬಂದಿಗಳಿಗೆ ವೇತನ ಪಾವತಿಗೆ ಸಾಧ್ಯವಾದಂತಾಗಿದೆ.