ರಾಜ್ಯ

ಮರಾಠಿ ಪ್ರಾಧಿಕಾರ ವಿವಾದ: ಬಲವಂತದಿಂದ ಬಂದ್ ನಡೆಸಿದರೆ ಕಠಿಣ ಕ್ರಮ- ಸಿಎಂ ಯಡಿಯೂರಪ್ಪ ಎಚ್ಚರಿಕೆ

Manjula VN

ಬೆಂಗಳೂರು: ಮರಾಠ ಪ್ರಾಧಿಕಾರ ರಚನೆಗೆ ಸರ್ಕಾರದ ಆದೇಶ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಬಲವಂತದಿಂದ ಬಂದ್ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮಹಾಜನ್ ತೀರ್ಪು ಅಂತಿಮ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ, ಮರಾಠಿಗರು ಸಹ ನಮ್ಮ ರಾಜ್ಯದ ಕನ್ನಡಿಗರೇ. ಇದು ಮರಾಠಾ ಅಭಿವೃದ್ಧಿಗಾಗಿ ಮಾಡಿರುವ ಪ್ರಾಧಿಕಾರ. ಮರಾಠಿಗರು ಕೂಡ ಕಟ್ಟಾ ಹಿಂದುತ್ವ ವಾದಿಗಳು. ಬೆಳಗಾವಿಯ ವಿಶ್ವಸಮ್ಮೇಳನದಲ್ಲೂ ಅವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಡಿ.5 ರಂದು ಬಂದ್ ಮಾಡುವ ಅಗತ್ಯವೇನಿಲ್ಲ. ಬಂದ್ ಗೆ ಕರೆ ನೀಡಿ, ಜನರಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು ಎಂದು ಹೇಳಿದರು.

ಸರ್ಕಾರ ಮರಾಠಾ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುತ್ತಿದೆಯೇ ವಿನಃ ಬೇರೆ ಯಾವುದೋ ಕಾರಣಕ್ಕಾಗಿ ಅಲ್ಲ. ಬಲವಂತದಿಂದ ಬಂದ್ ನಡೆಸಿದರೆ ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬೀದರ್ ಜಿಲ್ಲೆ, ಬೆಳಗಾವಿ ಮತ್ತು ಬಸವಕಲ್ಯಾಣದಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮರಾಠಿಗರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಅಭಿವೃದ್ಧಿಗಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಹೇಳಿದ್ದರು. 

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿರುವ ಕನ್ನಡ ಸಂಘಟನೆಗಳು ಈ ತೀರ್ಮಾನವನ್ನು ಹಿಂಪಡೆಯಲು ನ.27ರವರೆಗೂ ಸರ್ಕಾರಕ್ಕೆ ಗಡುವು ನೀಡಿದ್ದು, ಅಷ್ಟರೊಳಗೆ ನಿರ್ಧಾರ ಹಿಂಪಡೆಯದೇ ಹೋದರೆ ಡಿ.5ರಂದು ಕರ್ನಾಟಕ ಬಂದ್ ನಡೆಸುವುದಾಗಿ ಎಚ್ಚರಿಸಿವೆ.

SCROLL FOR NEXT