ರಾಜ್ಯ

ಯಡಿಯೂರಪ್ಪ ಅವರೇ ಸಂಬಳ ಕೊಡಿ, ಇಲ್ಲ ಪ್ರಾಣ ಬಿಡಲು ಅನುಮತಿ ಕೊಡಿ: ಅತಿಥಿ ಉಪನ್ಯಾಸಕರ ಅಳಲು

Raghavendra Adiga

ಬೆಂಗಳೂರು: ಲಾಕ್‌ಡೌನ್ ಪ್ರಾರಂಭ ಆದಾಗಿನಿಂದ ನಯಾ ಪೈಸೆ ಸಂಬಳ ಕೊಡದೆ ರಾಜ್ಯ ಬಿಜೆಪಿ ಸರ್ಕಾರ ಅತಿಥಿ ಉಪನ್ಯಾಸಕರನ್ನು ಉಪವಾಸ ಕೆಡವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಮ್ಮ ಸಂಬಳ ಕೊಡಿ ಇಲ್ಲ ಪ್ರಾಣ ಬಿಡಲು ಅನುಮತಿ ಕೊಡಿ ಎಂದು ಅತಿಥಿ ಉಪನ್ಯಾಸಕ ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಆಮ್ ಆದ್ಮಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಯಾಗಿ ಸಂಬಳ ಸಿಗದೆ 23 ಜನ ಉಪನ್ಯಾಸಕರು ಜೀವ ಬಿಟ್ಟಿದ್ದಾರೆ, ನಿಮಗೆ ಇನ್ನೆಷ್ಟು ಜೀವ ಬೇಕು ಎಂದು ಪ್ರಶ್ನಿಸಿದರು. ಅನೇಕ ವರ್ಷಗಳಿಂ ದ ಕೇವಲ 10 ಸಾವಿರ ಸಂಬಳಕ್ಕೆ ಜೀತದಾಳುಗಳಂತೆ ದುಡಿಯುತ್ತಿದ್ದೇವೆ. ನಾವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವವರು ನಮ್ಮ ಭವಿಷ್ಯವೇ ಹಾಳಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. 

ಇನ್ನೊಬ್ಬ ಅತಿಥಿ ಉಪನ್ಯಾಸಕ ಎಲ್.ಎನ್.ರೆಡ್ಡಿ ಮಾತನಾಡಿ ಕಷ್ಟದ ಸಮಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಯಾಗಿ ಸಂಬಳ ನೀಡುವಂತೆ ಹೇಳಿ ಸರ್ಕಾರದ ಅಡಿಯಲ್ಲಿ ದುಡಿಯುತ್ತಿರುವ ನಮಗೆ ಸರ್ಕಾರವೇ ಮೋಸ ಮಾಡುತ್ತಿದೆ. ಕಾಲೇಜು ಪ್ರಾರಂಬವಾದ ನಂತರ ಮತ್ತೆ ನಮ್ಮನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದ್ದ  ಉನ್ನತ ಶಿಕ್ಷಣ ಸಚಿವರು ವಚನ ಭ್ರಷ್ಟರಾಗಿದ್ದಾರೆ ಎಂದರು.

ಆಮ್ ಆದ್ಮಿ ಪಕ್ಷದ ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್ ಮಾತನಾಡಿ ಲಾಕ್‌ಡೌನ್ ಪ್ರಾರಂಭ ಆದಾಗಿನಿಂದ ಅತಿಥಿ ಉಪಾನ್ಯಾಸಕರಿಗೆ  ನಯಾ ಪೈಸೆ ಸಂಬಳ ಕೊಟ್ಟಿಲ್ಲ. ನವೆಂಬರ್ 30ರ ಒಳಗೆ ಅತಿಥಿ ಉಪನ್ಯಾಸಕರ ವೇತನ ಪಾವತಿಯಾಗದಿದ್ದರೆ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.
 

SCROLL FOR NEXT