ರಾಜ್ಯ

ಆಕ್ಷೇಪಾರ್ಹ ವಿಡಿಯೊ ಇದ್ದ ಮೊಬೈಲ್ ಎಸ್ ಡಿ ಕಾರ್ಡು ಕಳೆದುಕೊಂಡು ಪಡಬಾರದ ಪಾಡು ಪಟ್ಟ ಮೈಸೂರಿನ ವೈದ್ಯ!

Sumana Upadhyaya

ಬೆಂಗಳೂರು: ತಾನು ಕಳೆದುಕೊಂಡ ಮೊಬೈಲ್ ಫೋನ್ ನ ಎಸ್ ಡಿ ಕಾರ್ಡ್ ನಿಂದ ಸುಲಿಗೆಕೋರರ ಕೈಗೆ ಸಿಕ್ಕಿ ಪಡಬಾರದ ಕಷ್ಟವನ್ನು ಮೈಸೂರಿನ ವೈದ್ಯರೊಬ್ಬರು ಪಟ್ಟಿದ್ದಾರೆ.

ಮೈಸೂರಿನ ದಟ್ಟಗಳ್ಳಿ ನಿವಾಸಿ ಡಾ ಪ್ರಕಾಶ್ ಬಾಬುರಾವ್ ಪೆರಿಯಾಪಟ್ನದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಪೆರಿಯಾಪಟ್ಟಣ ತಾಲ್ಲೂಕು ಬಿಜೆಪಿ ಅಧ್ಯಕ್ಷರೂ ಕೂಡ ಆಗಿದ್ದಾರೆ. ತಮ್ಮ ಮೊಬೈಲ್ ನ ಚಿಪ್ ಕಳೆದುಕೊಂಡಿದ್ದರು, ಅದರಲ್ಲಿ ಕೆಲವು ಆಕ್ಷೇಪಾರ್ಹ ವಿಡಿಯೊಗಳಿದ್ದವು.

ಅವರು ಕಳೆದುಕೊಂಡ ಎಸ್ ಡಿ ಕಾರ್ಡು ಪೆರಿಯಾಪಟ್ಟಣದ ನಿವಾಸಿ ನವೀನ್ ಎಂಬಾತನ ಕೈಗೆ ಸಿಕ್ಕಿತು. ಆತ ಕಳೆದ ಜನವರಿಯಲ್ಲಿ ವೈದ್ಯರನ್ನು ಭೇಟಿ ಮಾಡಿ ಎಸ್ ಡಿ ಕಾರ್ಡು ಕೊಡಬೇಕೆಂದರೆ ಹಣ ಕೊಡಬೇಕೆಂದು ಬೇಡಿಕೆಯಿಟ್ಟ. ನವೀನ್ ಮತ್ತು ಆತನ ಸ್ನೇಹಿತರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊಗಳನ್ನು ಅಪ್ ಲೋಡ್ ಮಾಡುವುದಾಗಿ ಕೂಡ ಬೆದರಿಕೆ ಹಾಕಿದರು.

ಬೇರೆ ವಿಧಿಯಿಲ್ಲದೆ ವೈದ್ಯರು ವಿವಿಧ ಕಂತುಗಳಲ್ಲಿ 30 ಲಕ್ಷ ರೂಪಾಯಿ ನೀಡಿದರು. ಕೆಲ ತಿಂಗಳು ಕಳೆದ ನಂತರ ನವೀನ್ ಮತ್ತು ಆತನ ಸ್ನೇಹಿತರಾದ ಹರೀಶ್, ಶಿವರಾಜ್, ವಿಜಯ್ ಮತ್ತು ಅನಿತಾ ಪೆರಿಯಾಪಟ್ಟಣ ಮತ್ತು ಹುಣಸೂರಿನವರಾಗಿದ್ದು ಮತ್ತೆ ವೈದ್ಯರನ್ನು ಭೇಟಿ ಮಾಡಿ 70 ಲಕ್ಷ ರೂಪಾಯಿ ಕೊಡಿ ಇಲ್ಲಾಂದ್ರೆ ವಿಡಿಯೊ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದರು.
ಅವರ ಬೇಡಿಕೆಯನ್ನು ಭರಿಸಲಾಗದೆ ಬಾಬುರಾವ್ ಮೈಸೂರು ಪೊಲೀಸರಿಗೆ ಕಳೆದ ನವೆಂಬರ್ 11ರಂದು ದೂರು ನೀಡಿದರು. ಕುವೆಂಪುನಗರ ಪೊಲೀಸರು ಕಳೆದ ನವೆಂಬರ್ 15ರಂದು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ.

ವೈದ್ಯರನ್ನು ಗುರಿಯಾಗಿಟ್ಟುಕೊಂಡು ಹಣ ಸುಲಿಗೆ ಮಾಡಲು ಪೊಲೀಸರು ಮಹಿಳೆಯನ್ನು ಬಳಸಿಕೊಂಡಿದ್ದರು. ಇವರು ಈ ರೀತಿ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳನ್ನು ಸಂಪರ್ಕಿಸುತ್ತಿದ್ದರು. ಇಲ್ಲಿ ಆರೋಪಿ ನವೀನ್ ಬಿಜೆಪಿ ಯುವ ಮೋರ್ಚಾದಿಂದ ಉಚ್ಛಾಟಿಸಲ್ಪಟ್ಟವನು.

SCROLL FOR NEXT