ರಾಜ್ಯ

ಮುಖ್ಯಮಂತ್ರಿ ವಿರುದ್ಧ ವಾಟಾಳ್ ಹೇಳಿಕೆಗೆ ರೇಣುಕಾಚಾರ್ಯ ಗರಂ: ಕ್ಷಮೆ ಕೋರಲು ಒತ್ತಾಯ

Nagaraja AB

ಬೆಂಗಳೂರು: ಮುಖ್ಯಮಂತ್ರಿ ವಿರುದ್ಧ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಬಳಸಿರುವ ಪದ ಅಕ್ಷಮ್ಯ ಪದವಾಗಿದ್ದು, ಕೂಡಲೇ ಅವರು ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಮುಖ್ಯಂತ್ರಿ ಅವರ ಕ್ಷಮೆ ಕೋರಬೇಕೆಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಗೃಹ ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಎಚ್ಚರಿಕೆ ನಡುವೆಯೂ ಒಂದು ವೇಳೆ ಬಂದ್ ನಡೆಸಿ ಜನ ಸಾಮಾನ್ಯರಿಗೆ ತೊಂದರೆ ಆದಲ್ಲಿ ಅದಕ್ಕೆ ನೀವೆ ಹೊಣೆ ಎಂದರು.

ಕನ್ನಡಪರ ಸಂಘಟನೆಗಳ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯಾತ್ನಾಳ್ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡ ರೇಣುಕಾಚಾರ್ಯ, ಯತ್ನಾಳ್ ಸರಿಯಾಗಿಯೇ ಹೇಳಿದ್ದಾರೆ. ಯಡಿಯೂರಪ್ಪ ಅವರ ವಯಸ್ಸು, ರಾಜಕೀಯ ಅನುಭವ ಅಪಾರ. ಅವರಿಗೆ ನೀತಿ ಪಾಠ ಹೇಳಲು ಹೊರಟಿರುವ ವಾಟಾಳ್ ನಾಗರಾಜ್ ಎಷ್ಟು ಬಾರಿ ಜನರಿಂದ ಆಯ್ಕೆಯಾಗಿದ್ದಾರೆ ಎಂದು ಪ್ರಶ್ನಿಸಿದರು.

ವಾಟಾಳ್ ನಾಗರಾಜ್ ಬಳಸಿರುವ ಭಾಷೆ ಸರಿ ಇಲ್ಲ, ಅವರು ಕೂಡಲೇ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ನನ್ನ ಭಾಷೆಯಲ್ಲೇ ಉತ್ತರ ಕೊಡುತ್ತೇನೆ ಎಂದು ಎಚ್ಚರಿಕೆ ನೀಡಿದ ರೇಣುಕಾಚಾರ್ಯ, ನಾವೆಲ್ಲರೂ ಕನ್ನಡಿಗರೇ, ನಮಗೂ ಕನ್ನಡ ನಾಡು ನುಡಿಯ ಬಗ್ಗೆ ಬದ್ಧತೆ ಇದೆ, ವಾಟಾಳ್ ನಾಲಗೆ ಬಿಗಿ ಹಿಡಿದು ಮಾತನಾಡಲಿ ಎಂದರು. 

SCROLL FOR NEXT