ರಾಜ್ಯ

ಹುಬ್ಬಳ್ಳಿಯಲ್ಲಿ ಹೃದ್ರೋಗ, ಕ್ಯಾನ್ಸರ್ ಹಾಗೂ ಮೂತ್ರಪಿಂಡ ಖಾಯಿಲೆ ಆಸ್ಪತ್ರೆ ಸ್ಥಾಪನೆ

Manjula VN

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಹುಬ್ಬಳ್ಳಿ ನಗರದಲ್ಲಿ ಜಯದೇವ ಹೃದ್ರೋಗ ಸಂಸ್ಥೆ, ಕಿದ್ವಾಯಿ ಸಹಯೋಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಮೂತ್ರಪಿಂಡ ಖಾಯಿಲೆ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದು ಎಂದು‌ ಆರೋಗ್ಯ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಹುಬ್ಬಳ್ಳಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ( ಕಿಮ್ಸ್) ನೂತನ ಆಡಳಿತ ಭವನ, ಕರ್ಡಿಯಾಲಜಿ(ಹೃದ್ರೋಗ) ಆಸ್ಪತ್ರೆ, ಶವಾಗರ, ಸ್ಕಿಲ್ ಲ್ಯಾಬ್ ಹಾಗೂ ರೆಟಿನಾ ಕ್ಲೀನಕ್ ಗಳ ನೂತನ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ‌ ಕೋವಿಡ್ ನಿಯಂತ್ರಣದಲ್ಲಿದೆ. ಇದುವರೆಗೆ 1 ಕೋಟಿ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯ ಸರ್ಕಾರ ಕೋವಿಡ್ ಬಾಧಿತರ ಚಿಕಿತ್ಸೆಗಾಗಿ 300 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಐರೋಪ್ಯ ರಾಷ್ಟ್ರಗಳು, ದೆಹಲಿ , ಅಹಮದಾಬಾದ್ ನಗರಗಳಲ್ಲಿ ಕೋವಿಡ್ ರೋಗದ ಎರಡನೇ ಅಲೆ ಕಂಡುಬರುತ್ತಿದೆ. ಇದನ್ನು ರಾಜ್ಯ ಸರ್ಕಾರ ಗಮನಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ಕೋವಿಡ್ ಬಾಧಿತರ ಸಾವಿನ ಪ್ರಮಾಣ ಹಾಗೂ ಸೋಂಕಿತ ಪ್ರಮಾಣ ಕಡಿಮೆಯಿದೆ” ಎಂದಿದ್ದಾರೆ.

ಕಿಮ್ಸ್, ಕೋವಿಡ್ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಹಾಗೂ ಗುಣಮಟ್ಟದ ಚಿಕಿತ್ಸೆಗೆ ‌ನೀಡಿ ಉತ್ತಮ ಹೆಸರು ಗಳಿಸಿದೆ. ಕಿಮ್ಸ್ ಅಭಿವೃದ್ಧಿಗೆ ಬೇಕಾದ ಎಲ್ಲಾ ಆರ್ಥಿಕ ನೆರವು ನೀಡಿ, ಮೂಲಭೂತ ‌ಸೌಕರ್ಯಗಳನ್ನು ಕಲ್ಪಿಸಲಾಗುವುದು. ಹುಬ್ಬಳ್ಳಿಯನ್ನು ವಾಣಿಜ್ಯ ನಗರ ಎಂಬ ಖ್ಯಾತಿಯ ಜೊತೆಗೆ ಆರೋಗ್ಯ ನಗರವನ್ನಾಗಿಯೂ ಪರಿವರ್ತಿಸಲಾಗುವುದು ಎಂದು ಡಾ.ಕೆ.ಸುಧಾಕರ್ ಭರವಸೆ ನೀಡಿದರು.

SCROLL FOR NEXT