ರಾಜ್ಯ

ಮರಾಠ ಸಮುದಾಯ ನಿಗಮ ಸ್ಥಾಪನೆ: ಡಿ.5 ಬಂದ್ ಕರೆಗೆ ಕನ್ನಡ ಸಂಘಟನೆಗಳ ಬೆಂಬಲ ಅಚಲ!

Manjula VN

ಬೆಂಗಳೂರು: ರಾಜ್ಯ ಸರ್ಕಾರದ ಮರಾಠ ಸಮುದಾಯ ನಿಗಮ ಸ್ಥಾಪನೆ ಕ್ರಮ ವಿರೋಧಿಸಿ ಡಿ.5ರಂದು ಕರೆ ನೀಡಿದ್ದ ರಾಜ್ಯ ಬಂದ್'ಗೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಬಹುತೇಕ ಎಲ್ಲಾ ಕನ್ನಡಪರ ಸಂಘಟನೆಗಳೂ ಒಗ್ಗಟ್ಟಾಗಿ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ರಾಜ್ಯ ಬಂದ್ ಖಚಿತ ಎಂದು ಒಕ್ಕೊರಲಿನಿಂದ ಘೋಷಿಸಿವೆ. 

ಮರಾಠ ನಿಗಮ ವಿರೋಧಿಸುವವರು ನಕಲಿ ಹೋರಾಟಗಾರರು ಮತ್ತು ರೋಲ್ ಕಾಲ್ ಗಿರಾಕಿಗಳು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕನ್ನಡಪರ ಸಂಘಟನೆಗಳನ್ನು ಕೆರಳಿಸಿದೆ. ತಮ್ಮ ನಡುವಿನ ಭಿನ್ನಮತ ಬದಿಗೊತ್ತಿ ಒಗ್ಗೂಡವಂತೆ ಮಾಡಿದೆ. 

ಡಿ.5ರ ಬಂದ್ ಬಗ್ಗೆ ಇದ್ದ ಗೊಂದಲಗಳು ಬಗೆಹರಿದಿದ್ದು, ಒಂದೇ ವೇದಿಕೆಯಲ್ಲಿ ಪ್ರಮುಖ ಸಂಘಟನೆಗಳ ನಾಯಕರು ರಾಜ್ಯ ಬಂದ್ ಖಚಿತಪಡಿಸಿದ್ದಾರೆ. 

ಬುಧವಾರ ಬೆಂಗಳೂರಿನಲ್ಲಿ ಹೋರಾಟದ ರೂಪರೇಷೆ ಸಿದ್ಧಪಡಿಸುವ ಕುರಿತು ನಡೆದ ಸಭೆಯ ಬಳಿಕ, ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ, ಪ್ರವೀಶ್ ಶೆಟ್ಟಿ ಬಣ ಸೇರಿ ಬಹುತೇಕ ಕನ್ನಡ ಪರ ಸಂಘಟನೆಗಳು ಒಟ್ಟಾಗಿ ಬಂದ್ ಘೋಷಿಸಿವೆ. ಬಂದ್'ಗೆ ವಕೀಲರ ಸಂಘ, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿವೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಸಭೆಯಲ್ಲಿ ಅನೇಕ ಕನ್ನಡ ಪರ ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲ ನೀಡಿದ್ದಾರೆ. ನ.30ರ ಅಂತ್ಯದ ವೇಳೆಗೆ ಮರಾಠ ಸಮುದಾಯ ಅಭಿವೃದ್ಧಿ ನಿಗಮ ನಿರ್ಧಾರ ಹಿಂಪಡೆಯದಿದ್ದರೆ ಡಿ.5ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಬಂದ್ ಮಾಡುತ್ತೇವೆಂದು ಹೇಳಿದ್ದಾರೆ. 

ಅಲ್ಲದೆ, ಡಿ.5 ರಂದು ಬೆಂಗಳೂರಿನ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಬೃಹತ್ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ ಸುಮಾರು 5 ಲಕ್ಷ ಜನ ಭಾಗವಹಿಸಲಿದ್ದು, ಅಲ್ಲಿಂದ ಸರ್ಕಾರದ ವಿರುದ್ಧದ ಮುಂದಿನ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. 

SCROLL FOR NEXT