ರಾಜ್ಯ

ವಿಜಯನಗರ ಜಿಲ್ಲೆಗೆ ಆರು ತಾಲೂಕುಗಳ ಸೇರ್ಪಡೆ, ಹೊಸಪೇಟೆ ಜಿಲ್ಲಾ ಕೇಂದ್ರ; ರಾಜ್ಯ ಸಚಿವ ಸಂಪುಟ ಅನುಮೋದನೆ

Srinivasamurthy VN

ಬೆಂಗಳೂರು: ನೂತನ ವಿಜಯನಗರ ಜಿಲ್ಲೆಗೆ ಹೊಸಪೇಟೆಯನ್ನು ಜಿಲ್ಲಾಕೇಂದ್ರವನ್ನಾಗಿ ಮಾಡುವ ಮತ್ತು ಆರು ತಾಲೂಕುಗಳನ್ನು ಸೇರ್ಪಡೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ಹೌದು.. ವಿಜಯನಗರ ಜಿಲ್ಲೆಗೆ ಹೊಸಪೇಟೆ ಜಿಲ್ಲಾಕೇಂದ್ರವಾಗಿರಲಿದ್ದು, ಬಳ್ಲಾರಿ ಜಿಲ್ಲೆಯಲ್ಲಿದ್ದ ಹೊಸಪೇಟೆ, ಹರಪನಹಳ್ಳಿ, ಹೂವಿನ ಹಡಗಲಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲೂಕುಗಳನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಲು ಇಂದು ನಡೆದ ಸಚಿವ ಸಭೆಯಲ್ಲಿ ಈ  ಕುರಿತು ತೀರ್ಮಾನ ಮಾಡಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ 11 ತಾಲೂಕುಗಳು ಮತ್ತು ಮೂರು ಕಂದಾಯ ಉಪವಿಭಾಗಳಿದ್ದವು. ಸದ್ಯ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ರಚಿಸಿರುವ ಕಾರಣ ಆರು ತಾಲೂಕುಗಳು ಹೊಸ ಜಿಲ್ಲೆಗೆ ಸೇರ್ಪಡೆಯಾಗಿದೆ. ಹೀಗಾಗಿ ಬಳ್ಳಾರಿ ಜಿಲ್ಲೆಗೆ ಸದ್ಯ ಐದು ತಾಲೂಕುಗಳು  ಉಳಿದಿವೆ. ಬಳ್ಳಾರಿ, ಸಿರಗುಪ್ಪ, ಸಂಡೂರು, ಕಂಪ್ಲಿ ಮತ್ತು ಕುರಗೋಡು ತಾಲೂಕುಗಳು ಬಳ್ಳಾರಿ ಜಿಲ್ಲೆಯ ಭಾಗವಾಗಿ ಮುಂದುವರಿಯಲಿದೆ.

ಈ ಹಿಂದೆ ವಿಜಯನಗರ ಜಿಲ್ಲೆ ರಚನೆಗೆ ಸಚಿವ ಆನಂದ್ ಸಿಂಗ್ ಒತ್ತಾಯ ಮಾಡಿದ್ದರು. ಆನಂದ್ ಸಿಂಗ್ ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರವಾದ ಬಳಿಕ 2019ರ ಸಪ್ಟೆಂಬರ್ ನಲ್ಲೇ ವಿಜಯನಗರ ನೂತನ ಜಿಲ್ಲೆಯ ಬಗ್ಗೆ ಸಿಎಂ ಬಿಎಸ್ ವೈ ಘೋಷಣೆ ಮಾಡಿದ್ದರು. ಆದರೆ ಅದು  ಅನುಷ್ಠಾನಕ್ಕೆ ಬಂದಿರಲಿಲ್ಲ. ಸದ್ಯ ವಿಜಯನಗರ ಕರ್ನಾಟಕದ 31ನೇ ಜಿಲ್ಲೆಯಾಗಿ ರಚನೆಯಾಗಿದೆ.

SCROLL FOR NEXT