ರಾಜ್ಯ

ಬಳ್ಳಾರಿ ವಿಭಜನೆ: ಹೊಸಪೇಟೆಯಲ್ಲಿ ಭೂಮಿ ಬೆಲೆ ಗಗನಕ್ಕೆ; ರಿಯಲ್ ಎಸ್ಟೇಟ್ ವ್ಯವಹಾರ ಚುರುಕು!

Manjula VN

ಬೆಂಗಳೂರು: ಗಣಿ ಜಿಲ್ಲೆ ಬಳ್ಳಾರಿಯನ್ನು ವಿಭಜನೆ ಮಾಡಿ ರಾಜ್ಯ ಸರ್ಕಾರ ವಿಜಯನಗರ ಹೊಸ ಜಿಲ್ಲೆ ಉದಯಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಇದೀಗ ಬಳ್ಳಾರಿ-ಹೊಸಪೇಟೆ ಮುಖ್ಯರಸ್ತೆಯಲ್ಲಿರುವ ಭೂಮಿ ಬೆಲೆಗಳು ಗಗನಕ್ಕೇರಿದೆ.

ಹೊಸ ವಿಜಯನಗರವನ್ನು ರಾಜ್ಯದ 31ನೇ ಜಿಲ್ಲೆಯಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಹಾಗೂ ಹೊಸಪೇಟೆ ರಸ್ತೆಗಳಲ್ಲಿ ನೂತನ ಕಟ್ಟಡಗಳು ನಿರ್ಮಾಣಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಭೂಮಿಯ ಬೆಲೆಗಳು ದುಪ್ಪಟ್ಟಾಗಿವೆ ಎಂದು ತಿಳಿದುಬಂದಿದೆ. 

ನೂತನ ಜಿಲ್ಲೆ ಘೋಷಣೆಯಾದ ಬಳಿಕ ಹೊಸಪೇಟೆಯಲ್ಲಿ ಭೂಮಿ ಖರೀದಿಗೆ ಜನರು ಮುಗಿಬೀಳುತ್ತಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. ಹೊಸಪೇಟೆಯಲ್ಲಿ ಆಸ್ತಿ ಮಾಡಲು ಹೆಚ್ಚೆಚ್ಚು ಜನರು ಮನಸ್ಸು ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಲೀಕರು ಇದನ್ನು ಬಂಡವಾಳವಾಗಿಸಿಕೊಂಡು ದುಪ್ಪಟ್ಟು ಹಣ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಬಳ್ಳಾರಿ ಹಾಗೂ ಹೊಸಪೇಟೆಯಲ್ಲಿ ಸಾಕಷ್ಟು ರಾಜಕೀಯ ನಾಯಕರೂ ಕೂಡ ದೊಡ್ಡ ಮಟ್ಟದಲ್ಲಿ ಭೂಮಿಯನ್ನು ಹೊಂದಿದ್ದು, ಇದೂ ಕೂಡ ಭೂಮಿ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 

ಹೊಸಪೇಟೆಯ ಮಧ್ಯಭಾಗದಲ್ಲಿರುವ ಭೂಮಿಯ ಬೆಲೆ ಹಿಂದಿನಂತೆಯೇ ಇದೆ. ಆದರೆ, ಹೊರವಲಯದ ಮುಖ್ಯರಸ್ತೆಯಲ್ಲಿರುವೋ ಭೂಮಿಯ ಬೆಲೆ ಹಠಾತ್ ಏರಿಕೆಯಾಗಿವೆ. ಹೊರವಲಯದಲ್ಲಿರುವ ಭೂಮಿಯಲ್ಲಿ ಸಾಕಷ್ಟು ಜನರು ಅಂಗಡಿಗಳು ಹಾಗೂ ಮನೆಗಳನ್ನು ನಿರ್ಮಾಣ ಮಾಡಲು ಮುಂದಾಗುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಹೊಸ ಹೊಸ ಕಟ್ಟಡಗಳು ನಿರ್ಮಾಣವಾಗುವ ಸಾಧ್ಯತೆಗಳಿವೆ. ಹೀಗಾಗಿ ಪ್ರತಿ ಚದರ ಅಡಿ ಭೂಮಿ ಬೆಲೆ ರೂ.2000 ತಲುಪಿದೆ. ಹೊಸ ಜಿಲ್ಲೆ ಘೋಷಣೆಯಾದ ಬಳಿಕ ಭೂಮಿಯನ್ನು ಮಾರಲು ಮುಂದಾಗಿದ್ದ ಸಾಕಷ್ಟು ಜನರು ಇದೀಗ ನಿರಾಕರಿಸುತ್ತಿದ್ದಾರೆಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಹೇಳಿದ್ದಾರೆ. 

ಬಳ್ಳಾರಿಯಿಂದ ವಿಭಜನೆಗೊಂಡ ಬಳಿಕ ಹೊಸಪೇಟೆ ಗಣಿ ಪ್ರದೇಶ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಲಿದೆ. ಈ ಬೆಳವಣಿಗೆಯೇ ಜನರಲ್ಲಿ ಸ್ಪರ್ಧೆ ಮೂಡುವಂತೆ ಮಾಡಿದೆ. ಸಾಕಷ್ಟು ಜನರು ಹೊಸಪೇಟೆಗೆ ಸ್ಥಳಾಂತರಗೊಳ್ಳಲು ಮುಂದಾಗಿದ್ದಾರೆಂದು ತಿಳಿಸಿದ್ದಾರೆ. 

ಭೂಮಿ ಬೆಲೆ ಏರಿಕೆಯಾಗುತ್ತಿರುವುದನ್ನು ಸರ್ಕಾರದ ಸಂಸ್ಥೆಗಳು ಗಮನಿಸುತ್ತಿವೆ. ಕೃಷಿ ಆಸ್ತಿಗಳನ್ನು ಕಾನೂನು ಬಾಹಿರವಾಗಿ ಲೇಔಟ್ ಗಳನ್ನಾಗಿ ಮಾರ್ಪಡಿಸುವವರ ಮೇಲೂ ಕಣ್ಣಿಟ್ಟಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

SCROLL FOR NEXT