ರಾಜ್ಯ

ಚಿತ್ರದುರ್ಗ: ಕೊನೆಗೂ ಬೋನಿಗೆ ಬಿದ್ದ ಚಿರತೆ, ಕಿರು ಮೃಗಾಲಯಕ್ಕೆ ರವಾನೆ

Srinivasamurthy VN

ಚಿತ್ರದುರ್ಗ: ಚಿತ್ರದುರ್ಗದ ಹೊಸದುರ್ಗದ ನಿವಾಸಿಗಳ ಭೀತಿಗೆ ಕಾರಣವಾಗಿದ್ದ ಚಿರತೆ ಕೊನೆಗೂ ಇಂದು ಬೋನಿಗೆ ಬಿದ್ದಿದ್ದು, ಸ್ಥಳೀಯರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

ಹೌದು.. ಕಳೆದ ಕೆಲ ದಿನಗಳಿಂದ ಕಾಣಿಸಿಕೊಂಡು ಗ್ರಾಮಸ್ಥರು ಹಾಗೂ ರೈತರಲ್ಲಿ ಭೀತಿ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೋಮವಾರ ನಸುಕಿನಲ್ಲಿ ಬಲೆಗೆ ಬಿದ್ದಿದೆ. ಹೊಸದುರ್ಗ ತಾಲ್ಲೂಕಿನ ಕಸಬಾ ಹೋಬಳಿಯ ಬುರುಡೇಕಟ್ಟೆ ಗ್ರಾಮದ ರಂಗನಾಥಸ್ವಾಮಿ ಬೆಟ್ಟದಲ್ಲಿ ಅರಣ್ಯ ಇಲಾಖೆ  ಸಿಬ್ಬಂದಿ ಇರಿಸಿದ್ದ ಬೋನಿನಲ್ಲಿ ಸುಮಾರು ಮೂರು ವರ್ಷ ಪ್ರಾಯದ ಚಿರತೆ ಸೆರೆಸಿಕ್ಕಿದೆ.

ಕೆಲ ದಿನಗಳಿಂದ ಚಿರತೆ ಕಣ್ಣಿಗೆ ಬಿದ್ದ ಹಿನ್ನೆಲೆಯಲ್ಲಿ ಜನ ಭಯಭೀತರಾಗಿದ್ದರು. ಅಲ್ಲದೇ, ರೈತರು ತಮ್ಮ ಜಮೀನಿಗೆ ತೆರಳಲು ಹಿಂದೇಟು ಹಾಕುವಂತಾಗಿತ್ತು. ಈ ಕುರಿತಂತೆ ಅರಣ್ಯ ಇಲಾಖೆಗೆ ಸಾಕಷ್ಟು ಗ್ರಾಮಸ್ಥರು ದೂರು ಕೂಡ ನೀಡಿದ್ದರು. ಜನರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ  ಸಿಬ್ಬಂದಿ ಬೋನು ಇಟ್ಟಿದ್ದರು. ಅದರೊಳಗೆ ಹಸು ಕಟ್ಟಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆಯಾದ ಚಿರತೆಯನ್ನು ಜನರು ತಂಡೋಪತಂಡವಾಗಿ ಬಂದು ವೀಕ್ಷಿಸಿದರು. ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಚಿರತೆ ಸಾಗಿಸಲಾಯಿತು.
 

SCROLL FOR NEXT