ರಾಜ್ಯ

ಮೈಸೂರು ದಸರಾ: ವಿಶ್ವವಿಖ್ಯಾತ ಜಂಬೂಸವಾರಿಗೆ ‘ಗಜಪಯಣ’ ಆರಂಭ

Lingaraj Badiger

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಯಲಿದ್ದು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಗುರುವಾರ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳ ತಂಡ ವೀರನ ಹೊಸಹಳ್ಳಿಯಿಂದ ಪಯಣ ಆರಂಭಿಸಿದ್ದು, ಅರಮನೆ ನಗರಿಗೆ ಬಂದಿಳಿಯಲಿದೆ.

ಕೋವಿಡ್ 19 ಹಿನ್ನೆಲೆಯಲ್ಲಿ ಈ ವರ್ಷ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೆರವಣಿಗೆಗೆ ಅವಕಾಶ ಇಲ್ಲ. ಸಾಮಾನ್ಯವಾಗಿ 14 ಆನೆಗಳು ಪಾಲ್ಗೊಳ್ಳುತ್ತಿದ್ದವಾದರೂ, ಈ ಬಾರಿ ಅಭಿಮನ್ಯು, ವಿಜಯ, ಕಾವೇರಿ, ವಿಕ್ರಮ ಸೇರಿದಂತೆ ಕೇವಲ 5 ಆನೆಗಳು ಮಾತ್ರ ಭಾಗವಹಿಸಲಿವೆ.

ವೀರನ ಹೊಸಹಳ್ಳಿಯಲ್ಲಿ ಗಜಪಡೆಗೆ ಬೆಳಗ್ಗೆ 10 ರಿಂದ 11ರ ಒಳಗೆ ಪೂಜೆ ನೆರವೇರಿಸಲಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನತ್ತ ಗಜಪಡೆ ಪ್ರಯಾಣ ಬೆಳೆಸಿದೆ. ಪೂಜೆ ಕಾರ್ಯಕ್ರಮದಲ್ಲಿ ಕೇವಲ ಅಧಿಕಾರಿಗಳಷ್ಟೇ ಭಾಗಿಯಾಗಿದ್ದರು. 
ಗಜಪಯಣ ಪೂಜಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗಿಯಾಗಿರಲಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಗಜಪಯಣದ ಜವಾಬ್ದಾರಿಯನ್ನು ಔಪಚಾರಿಕವಾಗಿ ಹಮ್ಮಿಕೊಂಡಿತ್ತು.

ಈ ವೇಳೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾತನಾಡಿ, ಕೋವಿಡ್ ಹಿನ್ನೆಲೆ ಈ ಬಾರಿ ದಸರೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಪ್ರತಿ ಬಾರಿ ಸಂಪ್ರದಾಯದಂತೆ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಗಜಪಯಣಕ್ಕೆ ಚಾಲನೆ ನೀಡಲಾಗಿದೆ ಎಂದರು.

ಮೈಸೂರಿನ ಅರಣ್ಯ ಭವನಕ್ಕೆ ಟ್ರಕ್ ಗಳಲ್ಲಿ ಆಗಮಿಸುವ ಕ್ಯಾಪ್ಟನ್ ಅಭಿಮನ್ಯು ತಂಡವನ್ನು ಸ್ವಾಗತಿಸಲು ಅರಮನೆ ನಗರಿ ಸಿದ್ಧವಾಗಿದೆ. ಆನೆಗಳು ಅರಣ್ಯ ಭವನದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ.

SCROLL FOR NEXT