ರಾಜ್ಯ

ಮಾಸ್ಕ್ ಧರಿಸದಿದ್ದರೆ ನಗರದಲ್ಲಿ ರೂ.1000, ಹಳ್ಳಿಗಳಲ್ಲಿ ರೂ.500 ದಂಡ ವಿಧಿಸಲು ಸರ್ಕಾರ ನಿರ್ಧಾರ!

Manjula VN

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸದವರಿಗೆ ದಂಡ ಪ್ರಮಾಣವನ್ನು ನಗರ ಪ್ರದೇಶದಲ್ಲಿ ರೂ.1 ಸಾವಿರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರೂ.500ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. 

ಹಿರಿಯ ಅಧಿಕಾರಿಗಳ ಶಿಫಾರಸಿನ‌ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ಗುರುವಾರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಅಧಿಕಾರಿಗಳ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಡಾ.ಕೆ.ಸುಧಾಕರ್ ಅವರು ತಿಳಿಸಿದರು.

ಪೂರ್ತಿಯಾಗಿ ಮಾಸ್ಕ್ ಧರಿಸದವರಿಗೂ ಸಹ ದಂಡ ಅನ್ವಯವಾಗಲಿದೆ. ಇತ್ತೀಚಿನ‌ ದಿನಗಳಲ್ಲಿ ಮಾಸ್ಕ್‌ ಧರಿಸದೇ ನಿರ್ಲಕ್ಷ್ಯ ತೋರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈಗಿರುವ 200 ರೂ. ದಂಡವನ್ನು ಹೆಚ್ಚಿಸಲಾಗಿದೆ. ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಗೆ ಗುರಿ ನಿಗದಿ ಮಾಡಿ, ದಂಡ ವಸೂಲು ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ಮಾಡಲುವ ನಿರ್ಧಾರ ಮಾಡಬಾರದು ಎಂದಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಕೊರೋನಾ ಮಾರ್ಗಸೂಚಿಯನ್ನು ಅನುಸರಿಸಬೇಕು. ಎಲ್ಲಾ ಸರ್ಕಾರಿ ಕಚೇರಿಗಳ ಕೆಲಸಗಾರರೂ ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲವಾದರೆ, ಕಚೇರಿಗೆ ಪ್ರವೇಶವಿರುವುದಿಲ್ಲ. ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಮಾವೇಶ, ಮದುವೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗರಿಷ್ಠ 50 ಜನರು ಸೇರಲು ಮಾತ್ರ ಅವಕಾಶವಿರಲಿದೆ. 

ಹೆಚ್ಚು ಜನ ಸೇರಿದರೆ ಆಯೋಜಕರು ಅಥವಾ ಆ ಸಂಸ್ಥೆ ಮಾಲೀಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಸಾರಿಗೆ ಬಸ್'ಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. ಈ ನಿಯಮವನ್ನು ವ್ಯಾಪಕವಾಗಿ ಉಲ್ಲಂಘಿಸಿದ್ದು, ಇನ್ನು ಮುಂದೆ ಕಡ್ಡಾಯವಾಗಿ ಶೇ.50ರಷ್ಟು ಮಂದಿಯನ್ನು ಮಾತ್ರವೇ ಹತ್ತಿಸಿಕೊಳ್ಳಬೇಕು, ಜೊತೆಗೆ ಮಾಸ್ಕ್ ಇಲ್ಲದವರಿಗೆ ಬಸ್ ಒಳಗೆ ಪ್ರವೇಶ ನೀಡದಂತೆ    ನಿರ್ವಾಹಕರಿಗೆ ಸೂಚಿಸಲಾಗುವುದು ಎಂದು ಹೇಳಿದರು. 

ಮಾರುಕಟ್ಟೆ, ಮಾಲ್, ಪಾರ್ಕ್, ಇತರೆ ಸಾರ್ವಜನಿಕ ಸ್ಥಳದಲ್ಲಿ 5ಕ್ಕೂ ಹೆಚ್ಚು ಜನ ಗುಂಪುಗೂಡಿ ನಿಲ್ಲುವಂತಿಲ್ಲ. ಇವರ ನಡುವೆ ಸಹ ಕನಿಷ್ಠ 6 ಅಡಿ ಅಂತರವಿರಬೇಕು. ಇಲ್ಲವಾದರೆ, ಆ ಸಂಸ್ಥೆ ಮಾಲೀಕರ ಮೇಲೆ ದಂಡ ಪ್ರಯೋಗ ಮಾಡಲಾಗುವುದು. ಜೊತೆಗೆ ನಿರ್ಲಕ್ಷ್ಯ ಮುಂದುವರೆದರೆ ಪರವಾನಗಿಯನನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

SCROLL FOR NEXT