ರಾಜ್ಯ

ವನ್ಯ ಜೀವಿ ಬೇಟಿಯಾಡಿ ಮಾಂಸ, ಕೊಂಬು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

Raghavendra Adiga

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬ ಜಿಂಕೆ, ಆನೆದಂತ ಮತ್ತು ನಾಡ ಬಂದೂಕು ಮಾರಾಟ ಮಾಡಲು ಯತ್ನಿಸಿದಾಗ ಸಿ.ಕೆ.ಅಚ್ಚುಕಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆತನಿಂದ 5 ಜಿಂಕೆಯ ಕೊಂಬು, ಒಂದು ಚಿಕ್ಕ ಆನೆಯ ದಂತ, ಸಿಂಗಲ್ ಬ್ಯಾರಲ್ ನಾಡ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಕೋಣಾಳದೊಡ್ಡಿ ಗ್ರಾಮದ ನಿವಾಸಿ ಮಲ್ಲೇಶ (50) ಬಂಧಿತ ಆರೋಪಿ.

ಅ.3ರಂದು ಬೆಳಗ್ಗೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಬನಶಂಕರಿ 3ನೇ ಹಂತ, ಇಟ್ಟುಮಡು, ಚಿತ್ತೂರು ಬಸ್ ನಿಲ್ದಾಣದ ಬಳಿಯ ಗಂಗಮ್ಮ ದೇವಸ್ಥಾನದ ಹತ್ತಿರ ವ್ಯಕ್ತಿಯೊಬ್ಬ ಎರಡು ಗೋಣಿ ಚೀಲದಲ್ಲಿ ಜಿಂಕೆ ಕೊಂಬು, ಆನೆದಂತ, ನಾಡ ಬಂದೂಕು ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದಾನೆ ಎಂದು ಭಾತ್ಮೀದಾರರಿಂದ ಮಾಹಿತಿ ದೊರೆತಿದೆ. ತಕ್ಷಣ ಎಚ್ಚೆತ್ತ ಪೋಲೀಸರು ಆರೋಪಿಯನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ.

ಆರೋಪಿ ಮನೆಯಲ್ಲಿದ್ದ ನಾಡ ಬಂದೂಕಿನಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸ, ಚರ್ಮ, ಕೊಂಬುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಲ್ಲದೆ ಇದಾಗಲೇ ಒಂದು ಕೊಂಬನ್ನು ಮಾರಾಟ ಮಾಡಿದ್ದಾನೆ. ಉಳಿದ ಐದು ಕೊಂಬಿನ ಮಾರಾಟಕ್ಕೆ ನಗರಕ್ಕೆ ಆಗಮಿಸಿದ್ದ ವೇಳೆ ಪೋಲೀಸರ ಅತಿಥಿಯಾಗಿದ್ದಾನೆ.

ಇದೀಗ ಬಂಧಿತನಿಂದ  5 ಜಿಂಕೆ ಕೊಂಬು, ಆನೆ ದಂತ, ಸಿಂಗಲ್ ಬ್ಯಾರಲ್ ನಾಡಬಂದೂಕು ವಶಪಡಿಸಿಕೊಳ್ಳಲಾಗಿದೆ. 1972 ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
 

SCROLL FOR NEXT