ರಾಜ್ಯ

ಮಂಗಳೂರು ಸಮುದ್ರ ತೀರದಲ್ಲಿ ಡಾಲ್ಫಿನ್ ಸಂರಕ್ಷಣೆ ಯೋಜನೆಗೆ ಅರಣ್ಯ ಇಲಾಖೆ ಮುಂದು

Sumana Upadhyaya

ಮಂಗಳೂರು: ಕಡಲ ನಗರಿ ಮಂಗಳೂರಿನ ತೀರದಲ್ಲಿ ಡಾಲ್ಫಿನ್ ಸಂರಕ್ಷಣಾ ಕಾರ್ಯಕ್ರಮವನ್ನು ನಡೆಸಲು ಕರ್ನಾಟಕ ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ಅರಣ್ಯ ಇಲಾಖೆಯ ಮಂಗಳೂರು ವಿಭಾಗ ಐದು ವರ್ಷಗಳ ಡಾಲ್ಫಿನ್ ಸಂರಕ್ಷಣೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಪ್ರದೇಶಗಳ ಸಮೀಕ್ಷೆ ಮತ್ತು ಗಡಿರೇಖೆಗೆ ಅದರಲ್ಲಿ ಒತ್ತುನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಡಾಲ್ಫಿನ್‌ಗಳು ಕಾಣಿಸಿಕೊಂಡಿಲ್ಲ, ಆದರೆ ಹಲವಾರು ಡಾಲ್ಫಿನ್ ಶವಗಳು ತೀರಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ, ಕನಿಷ್ಠ ಆರು ಭಾರತೀಯ ಹಂಪ್ಬಾಕ್ ಡಾಲ್ಫಿನ್ ಗಳು ಸುರತ್ಕಲ್ ಸಮುದ್ರ ತೀರದ ಹತ್ತಿರ ಕೊಚ್ಚಿಕೊಂಡು ಬಂದಿದ್ದವು. ಅಂದರೆ ಇಲ್ಲಿ ಸಮುದ್ರದ ಪ್ರಬೇಧಗಳು ಇವೆ ಎಂದು ಕಂಡುಬರುತ್ತಿದೆ. ಅವುಗಳನ್ನು ಭಾರತೀಯ ವನ್ಯಜೀವಿ(ರಕ್ಷಣೆ) ಕಾಯ್ದೆ 1972ರಡಿ ಕಾಪಾಡಬೇಕಾಗುತ್ತದೆ.

ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಮಂಗಳೂರು ವಿಭಾಗದ ಕೆ ಕರಿಕಲನ್, ಮೃತದೇಹಗಳ ಆಧಾರದ ಮೇಲೆ ಮಾತ್ರ, ಮಂಗಳೂರು ಕರಾವಳಿಯಲ್ಲಿ ಡಾಲ್ಫಿನ್‌ಗಳ ಉಪಸ್ಥಿತಿಯನ್ನು ತೀರ್ಮಾನಿಸಲು ಸಾಧ್ಯವಿಲ್ಲ, ಬೇರೆ ಕಡೆಗಳಿಂದ ಇಲ್ಲಿಗೆ ಕೊಚ್ಚಿಕೊಂಡು ಬಂದಿರುವ ಸಾಧ್ಯತೆ ಕೂಡ ಇದೆ. ಆದ್ದರಿಂದ ಮಂಗಳೂರಿನ ಸಮುದ್ರ ತೀರದಲ್ಲಿ ಡಾಲ್ಫಿನ್ ಗಳು ಇವೆಯೇ ಎಂದು ಪರಿಶೀಲಿಸಲು ಮತ್ತು ಪ್ರದೇಶವನ್ನು ಗುರುತಿಸಲು ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಎಮ್ಎಫ್ಆರ್ಐ), ಫಿಶರೀಸ್ ಕಾಲೇಜ್, ಇಂಡಿಯನ್ ಕೋಸ್ಟ್ ಗಾರ್ಡ್ ಮತ್ತು ಇತರರ ತಜ್ಞರನ್ನು ಒಳಗೊಂಡ ಸಮೀಕ್ಷೆಯನ್ನು ಪ್ರಸ್ತಾಪಿಸಲಾಗಿದೆ. ಮುಲ್ಕಿ ಮತ್ತು ಉಲ್ಲಾಳ ಬೀಚ್ ನಡುವೆ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ, ಇದಕ್ಕಾಗಿ 1 ಕೋಟಿ ರೂಪಾಯಿ ವೆಚ್ಚವಿದೆ ಎಂದರು.

SCROLL FOR NEXT