ರಾಜ್ಯ

ಬೆಂಗಳೂರು: ಅಕ್ಟೋಬರ್ 13 ರಿಂದ 8 ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ

Shilpa D

ಬೆಂಗಳೂರು: ಬಿಎಂಟಿಸಿ ನಡೆಸುತ್ತಿರುವ ಪ್ರಯೋಗದ ಭಾಗವಾಗಿ ಅಕ್ಟೋಬರ್ 13 ರಿಂದ 12 ಮೀಟರ್ ಉದ್ದದ ಎಲೆಕ್ಟ್ರಿಕ್‌ ಬಸ್‌ಗಳು ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸಲಿವೆ. ಬೆಂಗಳೂರಿನ ರಸ್ತೆಗಳಿಗೆ ಎಲೆಕ್ಟ್ರಿಕ್‌ ಬಸ್‌ ಹೊಂದಿಕೊಳ್ಳುತ್ತವೆಯೇ ಎಂಬುದನ್ನು 4 ಬಸ್‌ಗಳನ್ನ ನಗರದ ಒಳಗಡೆ ಮತ್ತು 4 ಬಸ್‌ಗಳನ್ನ ನಗರದ ಹೊರಗಡೆ ಓಡಿಸಲು ನಿರ್ಧರಿಸಲಾಗಿದೆ.

ಸದ್ಯ, ಟೆಸ್ಟ್‌ ಟ್ರೈವ್‌ ನಡೆಸುತ್ತಿರುವ ಬಸ್ಸಿನಲ್ಲಿ 37 ಆಸನಗಳ ಸಾಮರ್ಥ್ಯವಿದ್ದು, ಅದನ್ನ 60 ಸೀಟುಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ. ಟೆಸ್ಟ್‌ ಡ್ರೈವ್‌ ಯಶಸ್ವಿಯಾದರೆ ಮತ್ತಷ್ಟು ಬಸ್ಸುಗಳು ರೋಡಿಗಿಳಿಯುವ ಸಾಧ್ಯತೆ ಇದೆ. ಹಲವು ಬಸ್‌ ತಯಾರಿಕಾ ಸಂಸ್ಥೆಗಳು ಈಗಾಗಲೇ ಬಿಎಂಟಿಸಿಯನ್ನ ಸಂಪರ್ಕಿಸಿದ್ದಾರೆ.

ಒಂದು ತಿಂಗಳವರೆಗೆ ಟ್ರಯಲ್‌ ರನ್‌ ನಡೆಯಲಿದ್ದು, ಆರಂಭದಲ್ಲಿ ಮರಳು ಚೀಲಗಳನ್ನು ಪ್ರಯಾಣಿಕರ ಜಾಗದಲ್ಲಿ ಇರಿಸಲಾಗುತ್ತದೆ. ಬಳಿಕ ಟೆಂಡರ್‌ ಪೂರ್ಣಗೊಳಿಸಲಾಗುತ್ತದೆ. ಪ್ರಸ್ತುತ, ಡೀಸೆಲ್ ಬಸ್‌ಗಳ ಪ್ರಯಾಣದ ವೆಚ್ಚ 43 ರೂ / ಕಿ.ಮೀ ಮತ್ತು ಎಸಿ ಬಸ್‌ಗಳಿಗೆ 69 / ಕಿ.ಮೀ ರೂ.ಗೆ ಇದ್ದರೆ ಎಲೆಕ್ಟ್ರಿಕ್‌ ಬಸ್‌ ವೆಚ್ಚ 89 ಕಿಮೀ ರೂ. ಎನ್ನಲಾಗಿದೆ. ಇದನ್ನು ತಗ್ಗಿಸುವ ಆಶಯವನ್ನು ನಿಗಮ ಹೊಂದಿದೆ.

ಕೇಂದ್ರದ ಭಾರಿ ಕೈಗಾರಿಕೆಗಳ ಸಚಿವಾಲಯವು ಫೇಮ್‌ ಇಂಡಿಯಾ ಯೋಜನೆಯಡಿ ಕರ್ನಾಟಕದಲ್ಲಿ 400 ಇ-ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ಸಬ್ಸಿಡಿ ನೀಡುತ್ತಿದೆ. ಇದರಲ್ಲಿ 300 ಬಸ್‌ಗಳು ರಾಜಧಾನಿಗೆ ಲಭಿಸಿವೆ. ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆದು ಕಾರ್ಯಾಚರಣೆಗೊಳಿಸುವ ಷರತ್ತಿನ ಮೇಲೆ ಕೇಂದ್ರವು ಸಬ್ಸಿಡಿ ನೀಡುತ್ತಿದೆ. ಹೀಗಾಗಿ, ಬಿಎಂಟಿಸಿಯು ಎರಡು ಬಾರಿ ಟೆಂಡರ್‌ ಆಹ್ವಾನಿಸಿತ್ತು. ಮೊದಲ ಸಲ ಪ್ರತಿ ಕಿ.ಮೀ. ಗೆ 105 ರೂ. ನಮೂದಿಸಿ ಕಂಪೆನಿಗಳು ಬಿಡ್‌ ಸಲ್ಲಿಸಿದ್ದವು

ಹೈದರಾಬಾದ್‌ ಮೂಲದ ಒಲೆಕ್ಟ್ರಾ ಕಂಪನಿಯು ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್‌ ಬಸ್‌ ಅನ್ನು ಓಡಿಸಲಿದೆ. ಇದಕ್ಕಾಗಿ ಮೆಜೆಸ್ಟಿಕ್‌ ಡಿಪೊ 7ರಲ್ಲಿ ಚಾರ್ಜಿಂಗ್‌ ಘಟಕವನ್ನು ಸ್ಥಾಪಿಸಲಾಗಿದೆ. ಎರಡನೇ ಸಲ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ ಒಲೆಕ್ಟ್ರಾ ಕಂಪೆನಿ ಹವಾನಿಯಂತ್ರಿತ ಎಲೆಕ್ಟ್ರಿಕ್‌ ಬಸ್‌ಗಳಿಗೆ ಪ್ರತಿ ಕಿ.ಮೀ. ಗೆ 89.64 ರೂ. ನಮೂದಿಸಿ ಬಿಡ್‌ ಸಲ್ಲಿಸಿತ್ತು. ದರ ಸಂಧಾನದ ಬಳಿಕ 69 ರೂ. ಗಳಿಗೆ ಒಪ್ಪಿಕೊಂಡಿತ್ತು. ಇದು ಕೂಡ ದುಬಾರಿ ಎನಿಸಿದ್ದರಿಂದ ರದ್ದುಪಡಿಸಲಾಯಿತು

ಇದಲ್ಲದೆ, ಕೆಂಗೇರಿ ಮತ್ತು ಯಶವಂತಪುರ ಡಿಪೊದಲ್ಲೂ ಚಾರ್ಜಿಂಗ್‌ ಘಟಕವನ್ನು ಅಳವಡಿಸಲು ತೀರ್ಮಾನಿಸಲಾಗಿದೆ. 15 ದಿನಗಳ ಕಾಲ ಮರಳಿನ ಮೂಟೆಗಳನ್ನು ಬಸ್ಸಿನಲ್ಲಿ ಇರಿಸಿ ಸಂಚರಿಸುವ ಮೂಲಕ ಕಾರ್ಯಕ್ಷಮತೆ ಪರಿಶೀಲಿಸಲಾಗುತ್ತದೆ. ಆನಂತರ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಅದರ ಸಾಮರ್ಥ್ಯ ಮತ್ತು ಒಮ್ಮೆ ಚಾರ್ಜಿಂಗ್‌ ಮಾಡಿದ ಬಳಿಕ ಎಷ್ಟು ಕಿ.ಮೀ. ಸಂಚರಿಸುತ್ತದೆ ಎಂಬುದನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ.

SCROLL FOR NEXT