ರಾಜ್ಯ

ಕೋವಿಡ್ ಪರೀಕ್ಷೆ ನಿರಾಕರಿಸಿದರೆ ಜೈಲು ಶಿಕ್ಷೆ: ಆರೋಗ್ಯ ಇಲಾಖೆ ಆದೇಶ

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಆರಂಭದಲ್ಲೇ ಸೋಂಕು ಪತ್ತೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ಹೌದು.. ಸರ್ಕಾರದ ಮಾರ್ಗಸೂಚಿಯ ಅನುಸಾರ ಯಾರಿಗೆ ಕೋವಿಡ್-19 ಪರೀಕ್ಷೆಗೆ ಒಳಪಡಲು ಸೂಚಿಸಲಾಗುತ್ತದೆಯೋ ಅಂತಹವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪರೀಕ್ಷೆಗೆ ನಿರಾಕರಿಸುವಂತಿಲ್ಲ. ಒಂದು ವೇಳೆ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿದರೆ 3 ವರ್ಷ ಜೈಲು ಅಥವಾ 50 ಸಾವಿರ ದಂಡದ ಶಿಕ್ಷೆ ವಿಧಿಸಲಾಗುತ್ತದೆ.  ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. 

ರೋಗ ಹರಡುವಿಕೆ ತಡೆಯುವ ಉದ್ದೇಶದಿಂದ ಕೊರೊನಾ ಸೋಂಕಿತರು ಹಾಗೂ ಸೋಂಕು ಶಂಕಿತರನ್ನು ಗುರುತಿಸಲಾಗುತ್ತಿದೆ. ಇದರಿಂದ ಮರಣ ಪ್ರಮಾಣ ಕೂಡ ಕಡಿಮೆ ಮಾಡಲು ಸಾಧ್ಯ. ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಸಾರಿ)  ಎದುರಿಸುತ್ತಿರುವವರು, ಕೋವಿಡ್ ಕಾರ್ಯದಲ್ಲಿ ನಿರತರಾಗಿರುವ ಆರೋಗ್ಯ ಸಿಬ್ಬಂದಿ, ಕಂಟೈನ್‌ಮೆಂಟ್ ಹಾಗೂ ಬಫರ್ ವಲಯದ ನಿವಾಸಿಗಳು, ಕೋವಿಡ್ ಪೀಡಿತರ ಸಂಪರ್ಕಿತರು ಹಾಗೂ ಸೋಂಕಿನ ಲಕ್ಷಣಗಳು ಇರುವವರಿಗೆ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಇದೇ ವೇಳೆ ಕೆಲವು ವ್ಯಕ್ತಿಗಳು ಪರೀಕ್ಷೆಗೆ ನಿರಾಕರಿಸುತ್ತಿರುವ ಪರಿಣಾಮ ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟಾರೆ ಸೋಂಕಿತರ ಪೈಕಿ ಶೇ.60 ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳು ಕೋವಿಡ್ ಪರೀಕ್ಷೆಗೆ ಅಸಹಕಾರ  ತೋರುತ್ತಿದ್ದಾರೆ. ಇದರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅಲ್ಲದೆ ಸಾವಿನ ಪ್ರಮಾಣ ಕೂಡ ಅಧಿಕವಾಗುತ್ತಿದೆ. ಆದ್ದರಿಂದ ಕೋವಿಡ್ ಪರೀಕ್ಷೆಗೆ ಅಗತ್ಯ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

SCROLL FOR NEXT