ರಾಜ್ಯ

ಬೆಂಗಳೂರಿನಲ್ಲಿ ಎನ್ಐಎ ಕಾರ್ಯಾಚರಣೆ; ಉಗ್ರ ಸಂಘಟನೆಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದ ಇಬ್ಬರು ಶಂಕಿತರ ಬಂಧನ!

Manjula VN

ಬೆಂಗಳೂರೂ: ವಿಶ್ವದ ರಕ್ತ ಪಿಪಾಸು ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನ ಇಬ್ಬರು ಪ್ರಮುಖ ನಾಯಕರನ್ನು ರಾಷ್ಟ್ರೀಯ ತನಿಖಾ ದಳವು ಗುರುವಾರ ಬಂಧನಕ್ಕೊಳಪಡಿಸಿದೆ. 

ಬಂಧಿತರು ಬೆಂಗಳೂರಿನ ಮುಸ್ಲಿಂ ಯುವಕರಿಗೆ ಮೂಲಭೂತವಾದ ಭೋಧಿಸಿ ಸಿರಿಯಾಗದೆ ಕಳುಹಿಸುತ್ತಿದ್ದ ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದವರಾಗಿದ್ದಾರೆಂದು ಹೇಳಲಾಗುತ್ತಿದೆ.

ಫ್ರೇಜರ್ ಟೌನ್'ನ ಇರ್ಫಾನ್ ನಾಸೀರ್ (33) ಹಾಗೂ ತಮಿಳುನಾಡು ರಾಮನಾತಪುರದ ಅಹ್ಮದ್ ಅಬ್ದುಲ್ ಖಾದರ್ (40) ಬಂಧಿತರಾಗಿದ್ದಾರೆ. 

ಆರೋಪಿಗಳಿಗೆ ಸೇರಿದ ಗುರಪ್ಪನಪಾಳ್ಯ ಹಾಗೂ ಫ್ರೇಜರ್ ಟೌನ್ ಗಳಲ್ಲಿರುವ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಮೊಬೈಲ್ ಹಾಗೂ ಹಾರ್ಡ್ ಡಿಸ್ಕ್ ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ ಇಬ್ಬರನ್ನೂ 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಎನ್ಐಎ ಹೇಳಿದೆ. 

ಕೆಲ ದಿನಗಳ ಹಿಂದೆ ಇಸಿಸ್ ಸಂಘಟನೆಗೆ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಸೆರೆಯಾಗಿದ್ದ ಇಸಿಸ್ ಶಂಕಿತ ಉಗ್ರ ಡಾ.ಅಬ್ದುಲ್ ರೆಹಮಾನ್ ಅಲಿಯಾಸ್ ಡಾ.ಬ್ರೇವ್ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಎನ್ಐಎ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಬಂಧಿಸಿದೆ. ಬೆಂಗಳೂರು ಇಸಿಸ್ ಘಟಕವಾದ ಕುರಾನ್ ಸರ್ಕಲ್ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಯಿತು. ವಿಚಾರಣೆ ವೇಳೆ ಅಬ್ದುಲ್ ರೆಹಮಾನ್ ತನ್ನ ಸಹಚರರ ಬಗ್ಗೆ ಬಾಯ್ಬಿಟ್ಟಿದ್ದಾನೆಂದು ವರದಿಗಳು ತಿಳಿಸಿವೆ ಅಲ್ಲದೆ, ಸಿರಿಯಾಗೆ ತೆರಳಲು ಆರ್ಥಿಕ ನೆರವಿನ ಮೂಲವು ಬಹಿರಂಗಪಡಿಸಿದ್ದ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ. 

SCROLL FOR NEXT